ವಾಯುಪ್ರದೇಶ ನಿರ್ಬಂಧದಿಂದ ಪಾಕಿಸ್ತಾನಕ್ಕೆ 850 ಕೋಟಿ ರೂ. ನಷ್ಟ: ಪಾಕ್ ಸಚಿವ

Update: 2019-07-19 17:20 GMT

ಕರಾಚಿ, ಜು. 19: ಫೆಬ್ರವರಿಯಿಂದ ಜಾರಿಯಲ್ಲಿರುವ ವಾಯು ಪ್ರದೇಶ ನಿರ್ಬಂಧದಿಂದಾಗಿ ಪಾಕಿಸ್ತಾನಕ್ಕೆ 850 ಕೋಟಿ ರೂಪಾಯಿ (ಸುಮಾರು 365 ಕೋಟಿ ಭಾರತೀಯ ರೂಪಾಯಿ) ನಷ್ಟವಾಗಿದೆ ಎಂದು ಆ ದೇಶದ ವಾಯುಯಾನ ಸಚಿವ ಗುಲಾಮ್ ಸರ್ವರ್ ಖಾನ್ ಗುರುವಾರ ಹೇಳಿದ್ದಾರೆ.

ಫೆಬ್ರವರಿ 14ರಂದು ಸಿಆರ್‌ಪಿಎಫ್ ವಾಹನಗಳ ಸಾಲಿನ ಮೇಲೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್‌ಗೆ ಸೇರಿದ ಭಯೋತ್ಪಾದಕನೊಬ್ಬ ಆತ್ಮಹತ್ಯಾ ದಾಳಿ ನಡೆಸಿದ ಬಳಿಕ, ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. ಆ ದಾಳಿಯಲ್ಲಿ 40ಕ್ಕೂ ಅಧಿಕ ಯೋಧರು ಹುತಾತ್ಮರಾಗಿದ್ದಾರೆ.

ಇದರಿಂದಾಗಿ ವಿಮಾನಗಳು ಸುತ್ತು ಬಳಸಿ ಪ್ರಯಾಣಿಸಬೇಕಾಗಿದ್ದು, ಪ್ರಯಾಣಕ್ಕೆ ಹೆಚ್ಚು ಸಮಯ ತಗಲುತ್ತಿತ್ತು ಹಾಗೂ ಹೆಚ್ಚು ಇಂಧನ ವ್ಯಯವಾಗುತ್ತಿತ್ತು.

‘‘ಪಾಕಿಸ್ತಾನದ ನಾಗರಿಕ ವಾಯುಯಾನ ಪ್ರಾಧಿಕಾರವು 850 ಕೋಟಿ ರೂ. ನಷ್ಟ ಅನುಭವಿಸಿದೆ’’ ಎಂದು ಕರಾಚಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಹೇಳಿದರು.

‘‘ಭಾರತೀಯ ನಾಗರಿಕ ವಾಯುಯಾನ ಪ್ರಾಧಿಕಾರಗಳು ಅನುಭವಿಸಿದ ನಷ್ಟದ ನಿಖರ ಅಂಕಿಸಂಖ್ಯೆ ನಮ್ಮ ಬಳಿ ಇಲ್ಲ. ಆದರೆ ಅವರ ನಷ್ಟ ನಮಗಿಂತ ಹೆಚ್ಚಾಗಿದೆ’’ ಎಂದರು.

ಪಾಕಿಸ್ತಾನವು ಮಂಗಳವಾರ ಅಂತರ್‌ರಾಷ್ಟ್ರೀಯ ನಾಗರಿಕ ವಾಯುಯಾನಕ್ಕೆ ತನ್ನ ವಾಯುಪ್ರದೇಶವನ್ನು ಮತ್ತೆ ತೆರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News