ಬ್ರಿಟಿಶ್ ಹಡಗಿನ ಎಲ್ಲಾ ನಾವಿಕ ಸಿಬ್ಬಂದಿ ಸುರಕ್ಷಿತ: ಇರಾನ್

Update: 2019-07-21 16:54 GMT

ಟೆಹ್ರಾನ್,ಜು.21: ಇರಾನ್‌ನ ರೆವೆಲ್ಯೂಶನರಿ ಗಾರ್ಡ್ಸ್ ಸೇನೆಯು ವಶಪಡಿಸಿ ಕೊಂಡಿರುವ ಬ್ರಿಟಿಶ್ ತೈಲ ಟ್ಯಾಂಕರ್ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಸುರಕ್ಷಿತರಾಗಿದ್ದಾರೆಂದು ಇರಾನ್‌ನ ಹೊರ್ಮೊಝ್ಗಾನ್ ಪ್ರಾಂತದಲ್ಲಿ ಬಂದರು ಹಾಗೂ ನೌಕಾಯಾನ ಸಂಸ್ಥೆಯ ವರಿಷ್ಠ ಅಲ್ಲಾಮೊರಾದ್ ಅಫಿಫಿಪೊರ್ ರವಿವಾರ ತಿಳಿಸಿದ್ದಾರೆ.

ಹಡಗಿನ ಎಲ್ಲಾ 23 ಮಂದಿ ನಾವಿಕ ಸಿಬ್ಬಂದಿ ಬಂದರ್ ಅಬ್ಬಾಸ್ ಬಂದರಿನಲ್ಲಿ ಸುರಕ್ಷಿತರಾಗಿದ್ದಾರೆ ಹಾಗೂ ಆರೋಗ್ಯದಿಂದಿದ್ದಾರೆ ಎಂದು ಅವರು ಹೇಳಿದ್ದಾರೆ.

   ಈ ಮಧ್ಯೆ ತನ್ನ ತೈಲ ಟ್ಯಾಂಕರ್ ಹಡಗನ್ನು ಇರಾನ್ ವಶಪಡಿಸಿಕೊಂಡಿರುವುದನ್ನು ಬ್ರಿಟನ್ ಬಲವಾಗಿ ಖಂಡಿಸಿದ್ದು, ಇದೊಂದು ದ್ವೇಷಯುತವಾದ ಕೃತ್ಯವೆಂದು ಅದು ಆಕ್ರೋಶ ವ್ಯಕ್ತಪಡಿಸಿದೆ. ಹೊರ್ಮುಝ್ ಜಲಸಂಧಿಯಲ್ಲಿ ಅಂತಾರಾಷ್ಟ್ರೀಯ ಸಾಗರ ಯಾನ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅದನ್ನು ವಶಪಡಿಸಿಕೊಳ್ಳಲಾಗಿದೆಯೆಂಬ ಇರಾನ್‌ನ ವಾದವನ್ನು ಅದು ತಿರಸ್ಕರಿಸಿದೆ.

ವಶಪಡಿಸಿಕೊಳ್ಳಲಾದ ಬ್ರಿಟಿಶ್ ಟ್ಯಾಂಕರ್ ಹಡಗಿನಲ್ಲಿದ್ದ ಸಿಬ್ಬಂದಿ ಭಾರತ, ಲಾಟ್ವಿಯಾ ಹಾಗೂ ಫಿಲಿಪ್ಪೀನ್ಸ್ ದೇಶಗಳಿಗೆ ಸೇರಿದವರೆಂದು ತಿಳಿದುಬಂದಿದೆ. ವಶಪಡಿಸಿಕೊಳ್ಳಲಾದ ನೌಕೆಯಲ್ಲಿದ್ದ ಸಿಬ್ಬಂದಿಯನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಕೋರಿ ಟ್ಯಾಂಕರ್ ಹಡಗಿನ ಮಾಲಕರಾದ, ಸ್ವೀಡನ್ ಮೂಲದ ಸ್ಟೆನಾ ಬಲ್ಕ್ ಅವರು ಇರಾನ್‌ಗೆ ಔಪಚಾರಿಕವಾಗಿ ಮನವಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

    2015ರಲ್ಲಿ ಇರಾನ್ ಜೊತೆ ಏರ್ಪಡಿಸಲಾದ ಬಹುಪಕ್ಷೀಯ ಅಣುಶಕ್ತಿ ಒಪ್ಪಂದದಲ್ಲಿ ಬ್ರಿಟನ್ ಪಾಲುದಾರ ರಾಷ್ಟ್ರವಾಗಿದೆ. ಇದೀಗ ಟ್ಯಾಂಕರ್‌ನ್ನು ವಶಪಡಿಸಿಕೊಂಡಿರುವ ಇರಾನ್‌ನ ಕ್ರಮದಿಂದ ರೊಚ್ಚಿಗೆದ್ದಿರುವ ಅದು ಟೆಹ್ರಾನ್ ವಿರುದ್ಧ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಹೇರಲು ಯೋಚಿಸುತ್ತಿದೆಯೆನ್ನಲಾಗಿದೆ.

  ಜುಲೈ 4ರಂದು ಜಿಬ್ರಾಲ್ಟರ್ ಜಲಸಂಧಿಯಲ್ಲಿ ಸಿರಿಯದ ರ್ನಿಂ ಇರಾನ್‌ನ ಟ್ಯಾಂಕರ್ ಹಡಗು ಗ್ರೇಸ್ 1 ಅನ್ನು ಬ್ರಿಟನ್ ವಶಪಡಿಸಿಕೊಂಡ ಬಳಿಕ, ಪ್ರತೀಕಾರ ತೀರಿಸುವುದಾಗಿ ಟೆಹರಾನ್ ಬೆದರಿಕೆ ಹಾಕಿದ ಕೆಲವೇ ದಿನಗಳ ಬಳಿಕ ಈ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News