×
Ad

ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಜಯಿಸಿದ ಭಾರತ ‘ಎ’ ತಂಡ

Update: 2019-07-22 23:33 IST

ಆ್ಯಂಟಿಗುವಾ, ಜು.22: ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ನೇತೃತ್ವದ ಅಗ್ರ ಸರದಿಯ ದಾಂಡಿಗರ ಸಂಘಟಿತ ಪ್ರದರ್ಶನ ನೆರವಿನಿಂದ ಐದನೇ ಹಾಗೂ ಅಂತಿಮ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ಎ ತಂಡ ವೆಸ್ಟ್ ಇಂಡೀಸ್ ಎ ತಂಡದ ವಿರುದ್ಧ 8 ವಿಕೆಟ್‌ಗಳ ಅಂತರದ ಜಯ ದಾಖಲಿಸಿದೆ. ಈ ಗೆಲುವಿನ ಮೂಲಕ ಭಾರತ ಐದು ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿದೆ.

ರವಿವಾರ ಭಾರತದ ಸೀಮಿತ ಓವರ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದ ರಾಹುಲ್ ಚಹಾರ್(2-53), ರಾಹುಲ್ ಸೋದರ ಸಂಬಂಧಿ ದೀಪಕ್ ಚಹಾರ್(2-39) ಹಾಗೂ ವೇಗದ ಬೌಲರ್ ನವದೀಪ್ ಸೈನಿ(2-31) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿ ವೆಸ್ಟ್‌ಇಂಡೀಸ್ ಎ ತಂಡವನ್ನು 47.4 ಓವರ್‌ಗಳಲ್ಲಿ 236 ರನ್‌ಗೆ ನಿಯಂತ್ರಿಸಿದರು.

ಕೇವಲ ಒಂದು ರನ್‌ನಿಂದ ಶತಕ ವಂಚಿತರಾದ ಗಾಯಕ್ವಾಡ್(99)ಭಾರತದ ರನ್ ಚೇಸಿಂಗ್‌ನ ನೇತೃತ್ವವಹಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಶುಭಮನ್ ಗಿಲ್(69) ಹಾಗೂ ಶ್ರೇಯಸ್ ಅಯ್ಯರ್(61)ಅರ್ಧಶತಕಗಳ ಕೊಡುಗೆ ನೀಡಿ ಭಾರತ ಎ ತಂಡ 33 ಓವರ್‌ಗಳಲ್ಲಿ ಗುರಿ ತಲುಪಲು ನೆರವಾದರು.

40 ಎಸೆತಗಳನ್ನು ಎದುರಿಸಿದ ಗಿಲ್ 8 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ 69 ರನ್ ಗಳಿಸಿದರು. 12ನೇ ಓವರ್‌ನಲ್ಲಿ ಆಫ್ ಸ್ಪಿನ್ನರ್ ರಾಖೀಮ್ ಕಾರ್ನ್ ವಾಲ್‌ಗೆ ವಿಕೆಟ್ ಒಪ್ಪಿಸಿದರು.

ಕೀಮೊ ಪಾಲ್‌ಗೆ ವಿಕೆಟ್ ಒಪ್ಪಿಸಿದ ಗಾಯಕ್ವಾಡ್ 89 ಎಸೆತಗಳ ಇನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನು ಸಿಡಿಸಿದ್ದರು.

64 ಎಸೆತಗಳಲ್ಲಿ 61 ರನ್ ಗಳಿಸಿದ ಅಯ್ಯರ್,ಗಾಯಕ್ವಾಡ್ ಅವರೊಂದಿಗೆ 2ನೇ ವಿಕೆಟ್ ಜೊತೆಯಾಟದಲ್ಲಿ 112 ರನ್ ಸೇರಿಸಿದ್ದಾರೆ. ಇದಕ್ಕೂ ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್‌ಇಂಡೀಸ್ ‘ಎ’ ತಂಡಕ್ಕೆ ಆರಂಭಿಕ ಆಟಗಾರ ಸುನೀಲ್ ಅಂಬ್ರಿಸ್(61 ರನ್,52 ಎಸೆತ, 7 ಬೌಂಡರಿ, 2 ಸಿಕ್ಸರ್)ಉತ್ತಮ ಆರಂಭ ಒದಗಿಸಿದರು. ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 77 ರನ್ ಗಳಿಸಿದ್ದ ವಿಂಡೀಸ್ ಭಾರತದ ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿ 103 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತು.

70 ಎಸೆತಗಳಲ್ಲಿ 65 ರನ್ ಗಳಿಸಿದ ಶೆರ್ಫಾನ್ ರುಥರ್‌ಫೋರ್ಡ್ ಆತಿಥೇಯ ತಂಡ 236 ರನ್ ಗಳಿಸಲು ನೆರವಾಗಿದ್ದಾರೆ. ಖಾರಿ ಪೀರ್ 34 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 35 ರನ್ ಗಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್

► ಭಾರತ ಎ: 237/2(ಗಾಯಕ್ವಾಡ್ 99, ಗಿಲ್ 69, ಅಯ್ಯರ್ ಔಟಾಗದೆ 61, ಕೀಮೋ ಪಾಲ್ 1-37)

►ವೆಸ್ಟ್‌ಇಂಡೀಸ್ ಎ: 236 ರನ್‌ಗೆ ಆಲೌಟ್

(ರುಥರ್‌ಫೋರ್ಡ್ 65, ಅಂಬ್ರಿಸ್ 61, ನವ್‌ದೀಪ್ ಸೈನಿ 2-31, ದೀಪಕ್ ಚಹಾರ್ 2-39, ರಾಹುಲ್ ಚಹಾರ್ 2-53)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News