ಪ್ರಧಾನಿ ಮೋದಿ, ತೆಂಡುಲ್ಕರ್ಗೆ ಧನ್ಯವಾದ ತಿಳಿಸಿದ ಹಿಮಾ ದಾಸ್

Update: 2019-07-22 18:15 GMT

ಹೊಸದಿಲ್ಲಿ, ಜು.22: ಈ ತಿಂಗಳು ಚಿನ್ನದ ಓಟದಲ್ಲಿ(ಗೋಲ್ಡನ್ ರನ್)ತೊಡಗಿರುವ ಭಾರತದ ಓಟಗಾರ್ತಿ ಹಿಮಾ ದಾಸ್ ದೇಶಕ್ಕೆ ಇನ್ನಷ್ಟು ಪದಕಗಳನ್ನು ಗೆದ್ದುಕೊಡುವ ನಿಟ್ಟಿಯಲ್ಲಿ ಕಠಿಣ ಪರಿಶ್ರಮ ಮುಂದುವರಿಸುವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಭರವಸೆ ನೀಡಿದ್ದಾರೆ. ರವಿವಾರ ಟ್ವಿಟರ್‌ನ ಮೂಲಕ ಹಿಮಾಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ಮೋದಿ,‘‘ಕಳೆದ ಕೆಲವು ದಿನಗಳಲ್ಲಿ ಹಿಮಾ ದಾಸ್ ಅವರ ವೈಯಕ್ತಿಕ ಸಾಧನೆಯಿಂದ ಭಾರತ ತುಂಬಾ ಹೆಮ್ಮೆ ಪಡುತ್ತಿದೆ. ವಿವಿಧ ಟೂರ್ನಮೆಂಟ್‌ಗಳಲ್ಲಿ ಅವರು ದೇಶಕ್ಕೆ ಐದು ಚಿನ್ನದ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಇದು ಪ್ರತಿಯೊಬ್ಬರಿಗೂ ಖುಷಿ ತಂದಿದೆ. ಹಿಮಾ ದಾಸ್‌ಗೆ ಅಭಿನಂದನೆಗಳು. ಅವರ ಭವಿಷ್ಯ ಉಜ್ವಲವಾಗಿರಲಿ’’ ಎಂದು ಟ್ವೀಟ್ ಮಾಡಿದ್ದರು.

 ‘‘ಶುಭಾಶಯ ಕೋರಿರುವ ನರೇಂದ್ರ ಮೋದಿ ಸರ್‌ಗೆ ಕೃತಜ್ಞತೆಗಳು. ನಾನು ಇನ್ನಷ್ಟು ಕಠಿಣ ಶ್ರಮವಹಿಸಿ ದೇಶಕ್ಕೆ ಪದಕ ಗೆಲ್ಲಲು ಪ್ರಯತ್ನಿಸುವೆ’’ ಎಂದು ಹಿಮಾ ಪ್ರತಿಕ್ರಿಯೆ ನೀಡಿದ್ದಾರೆ.

ಯುರೋಪ್‌ನಲ್ಲಿ ಮೂರು ವಾರಗಳೊಳಗೆ ಐದನೇ ಚಿನ್ನದ ಪದಕ ಜಯಿಸಿರುವ 19ರ ಹರೆಯದ ಹಿಮಾ ದಾಸ್ ಅವರ ಸಾಧನೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್, ರಾಜಕಾರಣಿಗಳು ಹಾಗೂ ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘‘ಇಂದು ಸಂಜೆ ನನಗೆ ಕನಸು ನನಸಾದಂತೆ ಭಾಸವಾಗುತ್ತಿದೆ. ಕ್ರಿಕೆಟ್ ದೇವರು ಹಾಗೂ ನನ್ನ ಪ್ರೇರಣೆಯಾಗಿರುವ ಸಚಿನ್ ತೆಂಡುಲ್ಕರ್ ಸರ್ ನನಗೆ ಕರೆ ಮಾಡಿದ್ದರು. ನಿಮ್ಮ ಹಾರೈಕೆಗಳು ಹಾಗೂ ಸ್ಫೂರ್ತಿದಾಯಕ ಪದಗಳಿಗೆ ಧನ್ಯವಾದಗಳು’’ ಎಂದು ಸಚಿನ್ ಶುಭಾಶಯಕ್ಕೆ ದಾಸ್ ಪ್ರತಿಕ್ರಿಯೆ ನೀಡಿದರು.

ಹಿಮಾ ದಾಸ್ ಜು.20 ರಂದು ಶನಿವಾರ ಝೆಕ್ ಗಣರಾಜ್ಯದಲ್ಲಿ ನಡೆದ ನೋವ್ ಮೆಸ್ಟೊ ಮೆಟುಜಿ ಗ್ರಾನ್‌ಪ್ರಿನಲ್ಲಿ 400 ಮೀ. ಓಟದಲ್ಲಿ 52.09 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದರು. ಇದು ಈ ತಿಂಗಳಲ್ಲಿ ದಾಸ್ ಜಯಿಸಿದ 5ನೇ ಚಿನ್ನವಾಗಿದೆ. ಜು.17ರಂದು 200 ಮೀ.ಓಟದಲ್ಲಿ 4ನೇ ಚಿನ್ನ, ಜು.13 ರಂದು 200 ಮೀ.ಓಟದಲ್ಲಿ 3ನೇ ಚಿನ್ನ, ಜು.8 ರಂದು 200 ಮೀ. ಓಟದಲ್ಲಿ 2ನೇ ಚಿನ್ನ ಹಾಗೂ ಜು.2 ರಂದು 200 ಮೀ.ಓಟದಲ್ಲಿ ಮೊದಲ ಚಿನ್ನದ ಪದಕ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News