×
Ad

ಭಾರತಕ್ಕೆ ಇಂಡೋನೇಶ್ಯ ವಿರುದ್ಧ ಸೋಲು

Update: 2019-07-22 23:58 IST

ಬೀಜಿಂಗ್ , ಜು.22: ಏಶ್ಯ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೋಮವಾರ ಇಂಡೋನೇಶ್ಯ ವಿರುದ್ಧ ಭಾರತ 0-3 ಅಂತರದಲ್ಲಿ ಸೋತು ಹೊರಬಿದ್ದಿದೆ.

  ಚೀನಾದ ಸುಝೌನಲ್ಲಿ ನಡೆಯುತ್ತಿರುವ ಟೂರ್ನಮೆಂಟ್‌ನಲ್ಲಿ ವರ್ಲ್ಡ್ ನಂ.14 ಆಟಗಾರ ಮೈಸ್ನಮ್ ಮೀರಾಬಾ ಅವರು ಬಾಲಕರ ಸಿಂಗಲ್ಸ್‌ನಲ್ಲಿ ಇಂಡೋನೇಶ್ಯದ ಬಾಬಿ ಸೆಟಿಯಾಬುಡಿ ವಿರುದ್ಧ ತೀವ್ರ ಹೋರಾಟ ನಡೆಸಿದರೂ ಫಲಕಾರಿಯಾಗಲಿಲ್ಲ. ಸೆಟಿಯಾಬುಡಿ ಅವರು ಮಣಿಪುರದ ಮೀರಾಬಾರಿಗೆ 21-17, 15-21, 21-11 ಅಂತರದಲ್ಲಿ ಸೋಲುಣಿಸಿದರು.

59 ನಿಮಿಷದಲ್ಲಿ ಬಾಬಿ ಮತ್ತು ಮೀರಾಬಾ ನಡುವಿನ ಸೆಣಸಾಟ ಕೊನೆಗೊಂಡಿತು. ಮೀರಾಬಾ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅವರು ಈ ತಿಂಗಳ ಆರಂಭದಲ್ಲಿ ನಡೆದ ವೈಟ್ ನೈಟ್ ರಶ್ಯನ್ ಜೂನಿಯರ್ ಇಂಟರ್‌ನ್ಯಾಶನಲ್‌ನಲ್ಲಿ ಗೆಲ್ಲುವ ಮೂಲಕ ತನ್ನ ಪ್ರಥಮ ಅಂತರ್‌ರಾಷ್ಟ್ರೀಯ ಪಂದ್ಯ ಜಯಿಸಿದ್ದರು. ಏಶ್ಯನ್ ಟೂರ್ನಮೆಂಟ್‌ನಲ್ಲಿ ಕೊರಿಯಾ ಮತ್ತು ಮಕಾವು ವಿರುದ್ಧ ಮೀರಾಬಾ ಜಯ ಗಳಿಸಿದ್ದರು. ಪಂದ್ಯದಲ್ಲಿ ಸೋತರೂ ಅವರು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ಬಾಲಕಿಯರ ಸಿಂಗಲ್ಸ್‌ನಲ್ಲಿ ಮಾಳವಿಕಾ ಬಾನ್ಸೋಡ್ ಅವರು ವರ್ಲ್ಡ್ ನಂ.4 ಕುಸುಮಾ ವಾರ್ದನಿ ವಿರುದ್ಧ 20-22, 7-21 ಅಂತರದಲ್ಲಿ ಶರಣಾದರು.

 ಮಿಕ್ಸೆಡ್ ಡಬಲ್ಸ್‌ನಲ್ಲಿ ತಾನಿಶಾ ಕ್ರಾಸ್ಟೊ ಮತ್ತು ಸತೀಶ್ ಕುಮಾರ್ ಕರುಣಾಕರನ್ ಅವರು ಲಿಯೊ ರೊಲ್ಲಿ ಕಾರ್ನಾಂಡೊ ಮತ್ತು ಇನ್‌ದಾ ಕಾಯ್ಯೊ ಸಾರಿ ಜಾಮಿಲ್ ವಿರುದ್ಧ 15-21, 18-21 ಅಂತರದಲ್ಲಿ ಸೋಲೊಪ್ಪಿಕೊಂಡರು.

 ಭಾರತ ಈ ಮೊದಲು ಮಂಗೋಲಿಯಾ ಮತ್ತು ಮಕಾವು ಚೀನಾ ವಿರುದ್ಧ 5-0 ಅಂತರದಲ್ಲಿ ಜಯ ಗಳಿತ್ತು. ರೌಂಡ್ ರಾಬಿನ್‌ನಲ್ಲಿ ಕೊರಿಯಾ ವಿರುದ್ಧ 1-4 ಅಂತರದಲ್ಲಿ ಸೋಲು ಅನುಭವಿಸಿತ್ತು. ಕೊರಿಯಾ ಮೊದಲ ಸ್ಥಾನ ಮತ್ತು ಭಾರತ ಎರಡನೇ ಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದವು.

ವೈಯಕ್ತಿಕ ವಿಭಾಗದ ಸ್ಪರ್ಧೆಗಳು ಬುಧವಾರ ಆರಂಭಗೊಳ್ಳಲಿದೆ. ಮೀರಾಬಾ ಸಿಂಗಲ್ಸ್‌ನಲ್ಲಿ ಸ್ವರ್ಣ ಗೆಲ್ಲುವ ಪ್ರಯತ್ನ ನಡೆಸಲಿದ್ದಾರೆ. ಕಳೆದ ವರ್ಷ ಭಾರತದ ಲಕ್ಷಾ ಸೇನ್ ಚಿನ್ನ ಜಯಿಸುವ ಮೂಲಕ 54 ವರ್ಷದಲ್ಲಿ ಭಾರತದ ಪರ ಮೊದಲ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News