ಕೊಲ್ಲಿಯಲ್ಲಿ ಹಡಗುಗಳ ರಕ್ಷಣೆಗಾಗಿ ಯುರೋಪ್ ನೇತೃತ್ವದ ಪಡೆ

Update: 2019-07-23 16:26 GMT

ಲಂಡನ್, ಜು. 23: ಅರಬ್ ಕೊಲ್ಲಿಯಲ್ಲಿ ಹಡಗುಗಳಿಗೆ ರಕ್ಷಣೆ ನೀಡಲು ಯುರೋಪ್ ನೇತೃತ್ವದ ರಕ್ಷಣಾ ಪಡೆಯೊಂದನ್ನು ರೂಪಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ಬ್ರಿಟನ್ ಸೋಮವಾರ ಹೇಳಿದೆ.

ಬ್ರಿಟನ್‌ನ ತೈಲ ಟ್ಯಾಂಕರೊಂದನ್ನು ಇರಾನ್ ಕಳೆದ ವಾರ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಇರಾನ್‌ನ ಕೃತ್ಯ 'ಸರಕಾರಿ ಕಡಲ್ಗಳ್ಳತನ'ವಾಗಿದೆ ಎಂದು ಬ್ರಿಟನ್ ವಿದೇಶ ಸಚಿವ ಜೆರೆಮಿ ಹಂಟ್ ಬಣ್ಣಿಸಿದ್ದಾರೆ. ಆದರೆ, ಅದೇ ವೇಳೆ, ಬ್ರಿಟನ್ ಸಂಘರ್ಷ ಬಯಸುವುದಿಲ್ಲ ಎಂದು ಹೇಳಿದ್ದಾರೆ.

''ಈ ಪಡೆಯನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಸ್ಥಾಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ'' ಎಂದು ಹಂಟ್ ಹೇಳಿದರು. ಈ ವಲಯಕ್ಕೆ ಬ್ರಿಟನ್ ಕಳುಹಿಸಿರುವ ಎರಡನೇ ಯುದ್ಧನೌಕೆಯು ಜುಲೈ 29ರ ವೇಳೆಗೆ ತಲುಪಲಿದೆ ಎಂದರು.

ಅರಬ್ ಕೊಲ್ಲಿಯ ಆಯಕಟ್ಟಿನ ಹೋರ್ಮುಝ್ ಜಲಸಂಧಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲೂಶನರಿ ಗಾರ್ಡ್ ಕಾರ್ಪ್ಸ್ ಸೇನಾ ಘಟಕವು 'ಸ್ಟೆನಾ ಇಂಪೇರೊ' ಎಂಬ ತೈಲ ಟ್ಯಾಂಕರನ್ನು ಶುಕ್ರವಾರ ವಶಪಡಿಸಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ. ಅದಕ್ಕೂ ಎರಡು ವಾರಗಳ ಮೊದಲು, ಜಿಬ್ರಾಲ್ಟರ್‌ನಲ್ಲಿ ಬ್ರಿಟನ್ ಪಡೆಗಳು ಇರಾನ್‌ಗೆ ಸೇರಿದ ತೈಲ ಟ್ಯಾಂಕರೊಂದನ್ನು ವಶಪಡಿಸಿಕೊಂಡಿದ್ದವು.

► ಬ್ರಿಟನ್ ಜೊತೆ ಸಂಘರ್ಷ ಬಯಸುವುದಿಲ್ಲ: ಇರಾನ್

ಸೋಮವಾರ, ನೂತನ ಪ್ರಧಾನಿ ಬೊರಿಸ್ ಜಾನ್ಸನ್‌ಗೆ ನೀಡಿರುವ ಸಂದೇಶವೊಂದರಲ್ಲಿ, ನನ್ನ ದೇಶ ಬ್ರಿಟನ್ ಜೊತೆಗೆ ಸಂಘರ್ಷ ಬಯಸುವುದಿಲ್ಲ ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್ ಹೇಳಿದ್ದಾರೆ.

''ಇರಾನ್ ಸಂಘರ್ಷ ಬಯಸುತ್ತಿಲ್ಲ ಹಾಗೂ ಪರಸ್ಪರ ಗೌರವದ ಆಧಾರದಲ್ಲಿ ಇರಾನ್ ಬ್ರಿಟನ್ ಜೊತೆಗೆ ಸಾಮಾನ್ಯ ಸಂಬಂಧಗಳನ್ನು ಹೊಂದಲು ಬಯಸುತ್ತದೆ ಎನ್ನುವುದನ್ನು 10 ಡೌನಿಂಗ್ ಸ್ಟ್ರೀಟ್‌ಗೆ ಆಗಮಿಸುತ್ತಿರುವ ಬೊರಿಸ್ ಜಾನ್ಸನ್ ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ'' ಎಂದು ನಿಕಾರಗುವ ಪ್ರವಾಸದಲ್ಲಿರುವ ಝಾರಿಫ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News