×
Ad

ಹುದ್ದೆ ತ್ಯಜಿಸಲು ಶ್ರೀಲಂಕಾ ಮುಖ್ಯ ಕೋಚ್ ಚಂಡಿಕಗೆ ಸೂಚನೆ

Update: 2019-07-24 23:36 IST

ಕೊಲಂಬೊ, ಜು.24: ಬಾಂಗ್ಲಾದೇಶ ವಿರುದ್ಧ ಈಗ ನಡೆಯುತ್ತಿರುವ ಏಕದಿನ ಸರಣಿಯ ಬಳಿಕ ತನ್ನ ಹುದ್ದೆ ತೊರೆಯುವಂತೆ ಶ್ರೀಲಂಕಾದ ಮುಖ್ಯ ಕೋಚ್ ಚಂಡಿಕ ಹಥುರುಸಿಂಘಗೆ ಸೂಚಿಸಲಾಗಿದೆ.

ಶ್ರೀಲಂಕಾ ಕ್ರಿಕೆಟ್‌ನ ಕಾರ್ಯದರ್ಶಿ ಮೋಹನ್ ಡಿಸಿಲ್ವಾ ಅವರು ಹಥುರುಸಿಂಘೆಗೆ ಪತ್ರ ಬರೆದು ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಕೊನೆಗೊಂಡ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಕಳಪೆ ಪ್ರದರ್ಶನ ನೀಡಿದ ಬಳಿಕ ಹಥುರುಸಿಂಘ ಅವರ ಕೋಚ್ ಹುದ್ದೆಗೆ ಸಂಚಕಾರ ಬಂದಿತ್ತು.

ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ತಂಡ ಗ್ರೂಪ್ ಹಂತದಲ್ಲಿ ಕೇವಲ 3 ಪಂದ್ಯಗಳಲ್ಲಿ ಜಯ ಸಾಧಿಸಿ ಸೆಮಿ ಫೈನಲ್ ತಲುಪಲು ವಿಫಲವಾಗಿತ್ತು. ಇಂಗ್ಲೆಂಡ್‌ನಿಂದ ಸ್ವದೇಶಕ್ಕೆ ವಾಪಸಾದ ಬಳಿಕ ತನ್ನ ಗುತ್ತಿಗೆ ಒಪ್ಪಂದ ಕೊನೆಗೊಳ್ಳುವ ತನಕ ಕೋಚ್ ಹುದ್ದೆಯಲ್ಲಿ ಮುಂದುವರಿಯುವೆ. ಒಪ್ಪಂದ ವರ್ಷಾಂತ್ಯದ ತನಕವಿದೆ ಎಂದು ಹಥುರುಸಿಂಘ ಹೇಳಿದ್ದರು.

51ರ ಹರೆಯದ ಹಥುರುಸಿಂಘ 2017ರ ಡಿಸೆಂಬರ್‌ನಲ್ಲಿ ಕೋಚ್ ಆಗಿ ನೇಮಕವಾಗಿದ್ದರು. ಅದಕ್ಕೂ ಮೊದಲು ಬಾಂಗ್ಲಾದೇಶದ ಕೋಚ್ ಆಗಿದ್ದರು.

ಹಥುರುಸಿಂಘಗೆ ಶ್ರೀಲಂಕಾ ತಂಡವನ್ನು ಕಳಪೆ ಪ್ರದರ್ಶನದಿಂದ ಹೊರಬರುವಂತೆ ಮಾಡಲು ಸಾಧ್ಯವಾಗಲಿಲ್ಲ. ವಿಶ್ವಕಪ್‌ಗಿಂತ ಮೊದಲು 20 ಏಕದಿನ ಪಂದ್ಯಗಳಲ್ಲಿ ಲಂಕಾ 13ರಲ್ಲಿ ಸೋತಿತ್ತು. ಸತತ ಸೋಲಿನಿಂದಾಗಿ ಐಸಿಸಿ ಟೀಮ್ ರ್ಯಾಂಕಿಂಗ್‌ನಲ್ಲಿ 8ನೇ ಸ್ಥಾನಕ್ಕೆ ಕುಸಿದಿತ್ತು.

  ‘‘ಶ್ರೀಲಂಕಾದ ಇಡೀ ಕೋಚಿಂಗ್ ಸಿಬ್ಬಂದಿ ತಮ್ಮ ಹುದ್ದೆಯನ್ನು ತ್ಯಜಿಸಿ ವಿಶ್ವಕಪ್‌ನ ಕಳಪೆ ಪ್ರದರ್ಶನಕ್ಕೆ ಹೊಣೆ ಹೊರುವ ನಿರೀಕ್ಷೆಯಲ್ಲಿದ್ದೇನೆ’’ಎಂದು ಕ್ರೀಡಾಸಚಿವ ಫೆರ್ನಾಂಡೊ ಇತ್ತೀಚೆಗೆ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News