ಜಪಾನ್ ಓಪನ್: ಪ್ರಣೀತ್ ಸೆಮಿ ಫೈನಲ್‌ಗೆ ಲಗ್ಗೆ
ಟೋಕಿಯೊ, ಜು.26: ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತ ಶುಕ್ರವಾರ ಮಿಶ್ರ ಫಲ ಪಡೆದಿದೆ. ಶಟ್ಲರ್ ಬಿ.ಸಾಯಿ ಪ್ರಣೀತ್ ಸೆಮಿ ಫೈನಲ್‌ಗೆಪ್ರವೇಶ ಗಿಟ್ಟಿಸಿಕೊಂಡರೆ, ಒಲಿಂಪಿಕ್ಸ್ ಮೆಡಲಿಸ್ಟ್ ಪಿ.ವಿ.ಸಿಂಧು 750,000 ಯುಎಸ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯಲ್ಲಿ ಸೋಲನುಭವಿಸಿದರು.
ಪ್ರಣೀತ್ ಇಂಡೋನೇಶ್ಯದ ಟೊಮ್ಮಿ ಸುಗಿಯಾರ್ಟೊರನ್ನು ಸೋಲಿಸಿ ಅಂತಿಮ-4ರ ಹಂತ ತಲುಪಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಜಪಾನ್‌ನಅಕಾನೆ ಯಮಗುಚಿ ವಿರುದ್ಧ ನೇರ ಗೇಮ್‌ಗಳಿಂದ ಸೋಲನುಭವಿಸಿರುವ ಸಿಂಧು ಟೂರ್ನಿಯಿಂದ ನಿರ್ಗಮಿಸಿದರು.
ಕೇವಲ 36 ನಿಮಿಷಗಳಲ್ಲಿ ಕೊನೆಗೊಂಡ ಅಂತಿಮ-8ರ ಸುತ್ತಿನ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಪ್ರಣೀತ್ ಅವರು ಸುಗಿಯಾರ್ಟೊರನ್ನು 21-12, 21-15 ಗೇಮ್‌ಗಳ ಅಂತರದಿಂದ ಸೋಲಿಸಿದರು.
ಮಾಜಿ ಸಿಂಗಾಪುರ ಓಪನ್ ಚಾಂಪಿಯನ್ ಪ್ರಣೀತ್ ತನಗಿಂತ ಗರಿಷ್ಠ ರ್ಯಾಂಕಿನ ಎದುರಾಳಿ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದರು. ಮೊದಲ ಗೇಮ್‌ನ್ನು ಪ್ರಣೀತ್ 21-12 ಅಂತರದಿಂದ ಸೋಲಿಸಿದರು. ಎರಡನೇ ಗೇಮ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಅಂತಿಮವಾಗಿ ಪ್ರಣೀತ್ 21-15 ಅಂತರದಿಂದ ಜಯ ಸಾಧಿಸಿದರು.
ಸೆಮಿ ಫೈನಲ್‌ಗೆ ಪ್ರವೇಶಿಸಿರುವ ಪ್ರಣೀತ್ ಜಪಾನ್‌ನ ಅಗ್ರ ಶ್ರೇಯಾಂಕದ ಕೆಂಟೊ ಮೊಮೊಟಾರನ್ನು ಎದುರಿಸಲಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನಲ್ಲಿ ಸಿಂಧು ಮತ್ತೊಮ್ಮೆ ಯಮಗುಚಿ ಸವಾಲು ಎದುರಿಸಲು ವಿಫಲರಾದರು. 50 ನಿಮಿಷಗಳಲ್ಲಿ ಕೊನೆಗೊಂಡ ಕ್ವಾರ್ಟರ್ ಫೈನಲ್ ಫೈಟ್‌ನಲ್ಲಿ 18-21, 15-21 ಅಂತರದಿಂದ ಸೋಲನುಭವಿಸಿದರು.
ಇಂಡೋನೇಶ್ಯ ಓಪನ್‌ನಲ್ಲಿ 5ನೇ ಶ್ರೇಯಾಂಕದ ಸಿಂಧು, ಜಪಾನ್ ಆಟಗಾರ್ತಿ ಯಮಗುಚಿಗೆ ಶರಣಾಗಿದ್ದರು. ಇಂದು ಮೊದಲ ಗೇಮ್‌ನಲ್ಲಿ 11-7 ಮುನ್ನಡೆಯೊಂದಿಗೆ ಉತ್ತಮ ಆರಂಭ ಪಡೆದಿದ್ದರು. ಪ್ರಬಲ ತಿರುಗೇಟು ನೀಡಿದ ಯಮಗುಚಿ ಮೊದಲ ಗೇಮ್‌ನ್ನು 21-18 ಅಂತರದಿಂದ ಮಣಿಸಿದರು.
ಎರಡನೇ ಗೇಮ್‌ನಲ್ಲಿ 4ನೇ ಶ್ರೇಯಾಂಕದ ಜಪಾನ್ ಆಟಗಾರ್ತಿ ಸಿಂಧುಗೆ ಪ್ರಬಲ ಪೈಪೋಟಿ ನೀಡಿದರು. 21-15ರಿಂದ 2ನೇ ಗೇಮ್‌ನ್ನು ಜಯಿಸಿದ ಯಮಗುಚಿ ಚೀನಾದ ಚೆನ್ ಯು ಫೀ ವಿರುದ್ಧ ಸೆಮಿ ಫೈನಲ್ ಹೋರಾಟಕ್ಕೆ ಸಜ್ಜಾಗಿದ್ದಾರೆ.