ಎಲ್ಲ ಮಾದರಿ ಕ್ರಿಕೆಟ್‌ಗೆ ವೇಣುಗೋಪಾಲ್ ರಾವ್ ವಿದಾಯ

Update: 2019-07-30 17:50 GMT

ಹೈದರಾಬಾದ್, ಜು.30: ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ವೇಣುಗೋಪಾಲ್ ರಾವ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ಮಂಗಳವಾರ ವಿದಾಯ ಘೋಷಿಸಿದ್ದಾರೆ.

37ರ ಹರೆಯದ ವಿಶಾಖಪಟ್ಟಣದ ಆಟಗಾರ ವೇಣುಗೋಪಾಲ್ ಭಾರತದ ಪರ 16 ಏಕದಿನ ಪಂದ್ಯಗಳಲ್ಲಿ 24.22 ಸರಾಸರಿಯಂತೆ 218 ರನ್ ಗಳಿಸಿದ್ದರು. 1 ಅರ್ಧಶತಕ ದಾಖಲಿಸಿದ್ದರು.

 ಆಂಧ್ರ ಪ್ರದೇಶ ರಣಜಿ ತಂಡದ ಮಾಜಿ ನಾಯಕ ವೇಣುಗೋಪಾಲ್ ರಾವ್ 121 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ, 40.93 ಸರಾಸರಿಯಂತೆ 7,081 ರನ್ ಗಳಿಸಿದ್ದಾರೆ. 17 ಶತಕ ಮತ್ತು 30 ಅರ್ಧಶತಕಗಳನ್ನು ದಾಖಲಿಸಿದ್ದಾರೆ.

2000ರಲ್ಲಿ ವಿಶ್ವಕಪ್ ಜಯಿಸಿದ ಭಾರತದ ಅಂಡರ್-19 ತಂಡದ ಸದಸ್ಯರಾಗಿದ್ದರು.

ವೇಣುಗೋಪಾಲ್ ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್‌, ಸನ್‌ರೈಸರ್ಸ್‌ ಹೈದರಾಬಾದ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ಪರ ಒಟ್ಟು 65 ಪಂದ್ಯಗಳಲ್ಲಿ ಆಡಿದ್ದರು.

 ಆಂಧ್ರ ಪ್ರದೇಶದಿಂದ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದ ಎರಡನೇ ಆಟಗಾರ ವೇಣುಗೋಪಾಲ್. ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಆಂಧ್ರದ ಪರ ಮೊದಲ ಬಾರಿ ಟೀಮ್ ಇಂಡಿಯಾದ ಪರ ಆಡುವ ಅವಕಾಶ ಪಡೆದ ಮೊದಲ ಆಟಗಾರ ಎನಿಸಿಕೊಂಡಿದ್ದರು.

ವೇಣುಗೋಪಾಲ್ ರಣಜಿಯಲ್ಲಿ ರಾಜಸ್ಥಾನ ಮತ್ತು ಗುಜರಾತ್ ತಂಡವನ್ನು ಕೂಡಾ ಪ್ರತಿನಿಧಿಸಿದ್ದರು.

ದೇವಧರ್ ಟ್ರೋಫಿ, ವಿಜಯ್ ಹಝಾರೆ ಮತ್ತು ಚಾಲೆಂಜರ್ ಟ್ರೋಫಿಯಲ್ಲಿ ವೇಣುಗೋಪಾಲ್ ಉತ್ತಮ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ ‘ಎ’ ವಿರುದ್ಧ ದಕ್ಷಿಣ ವಲಯ ಪರ ಆಡಿದ್ದ ವೇಣುಗೋಪಾಲ್ ಸ್ಮರಣಿಯ ದ್ವಿಶತಕ(ಔಟಾಗದೆ 228 ) ದಾಖಲಿಸಿದ್ದರು.

 14 ವರ್ಷಗಳ ಹಿಂದೆ (ಜು.30, 2005) ಶ್ರೀಲಂಕಾ ವಿರುದ್ಧ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದರು. ಮಧ್ಯಮ ಸರದಿಯ ಬ್ಯಾಟ್ಸ್‌ಮನ್ ವೇಣುಗೋಪಾಲ್ ಅರೆಕಾಲಿಕ ಬೌಲರ್ ಆಗಿದ್ದರು. ತೆಲುಗಿನಲ್ಲಿ ವೀಕ್ಷಕ ವಿವರಣೆಗಾರನಾಗಿಯೂ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News