×
Ad

ಥಾಯ್ಲೆಂಡ್ ಓಪನ್: ಸೈನಾ, ಶ್ರೀಕಾಂತ್ ಶುಭಾರಂಭ

Update: 2019-07-31 23:01 IST

 ಬ್ಯಾಂಕಾಕ್, ಜು.31: ಐದನೇ ಶ್ರೇಯಾಂಕದ ಆಟಗಾರ ಕಿಡಂಬಿ ಶ್ರೀಕಾಂತ್, ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಗೆಲುವಿನೊಂದಿಗೆ ಶುಭಾರಂಭ ಮಾಡಿದರು. ಭಾರತದ ಮಿಶ್ರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ದೊಡ್ಡ ಗೆಲುವು ದಾಖಲಿಸಿ ಗಮನ ಸೆಳೆದರು.

ಸುಮಾರು ಎರಡು ತಿಂಗಳ ವಿರಾಮದ ಬಳಿಕ ಸಕ್ರಿಯ ಬ್ಯಾಡ್ಮಿಂಟನ್‌ಗೆ ವಾಪಸಾದ ಸೈನಾ ತನ್ನ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಥಾಯ್ಲೆಂಡ್‌ನ ಫಿಟ್ಟಾಯಪೋರ್ನ್ ಚೈವಾನ್‌ರನ್ನು 21-17, 21-19 ಗೇಮ್‌ಗಳಿಂದ ಸೋಲಿಸಿದರು.

ಏಳನೇ ಶ್ರೇಯಾಂಕದ ಸೈನಾ ಮುಂದಿನ ಸುತ್ತಿನಲ್ಲಿ ಜಪಾನ್‌ನ ಸಯಾಕಾ ತಕಹಶಿ ಅಥವಾ ಇಂಡೋನೇಶ್ಯದ ರುಸೆಲಿ ಹರ್ಟಾವನ್ ಸವಾಲು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಆಟಗಾರರಾದ ಕೆ.ಶ್ರೀಕಾಂತ್, ಎಚ್.ಎಸ್. ಪ್ರಣಯ್, ಪಿ.ಕಶ್ಯಪ್ ಹಾಗೂ ಶುಭಾಂಕರ್ ಡೇ ಶುಭಾರಂಭ ಮಾಡಿದ್ದಾರೆ.

ಇಲ್ಲಿ ಬುಧವಾರ ಒಂದು ಗಂಟೆ ಹಾಗೂ ಏಳು ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್ ಚೀನಾದ ಕ್ವಾಲಿಫೈಯರ್ ರೆನ್ ಪೆಂಗ್ ಬೋ ವಿರುದ್ಧ 21-13, 17-21, 21-19 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು.

 ಶ್ರೀಕಾಂತ್ ಎರಡನೇ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಖೋಸಿಟ್ ಫೆಟ್‌ಪ್ರದಾಬ್‌ರನ್ನು ಎದುರಿಸಲಿದ್ದಾರೆ. ಆದರೆ, ಸೌರಭ್ ವರ್ಮಾ ಅವರ ಹೋರಾಟ ಮೊದಲ ಸುತ್ತಿನಲ್ಲಿ ಕೊನೆಗೊಂಡಿದೆ. ಪ್ರಣಯ್ ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್‌ರನ್ನು 21-16, 22-20 ಸೆಟ್‌ಗಳ ಅಂತರದಿಂದ ಮಣಿಸಿದರು. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಕಶ್ಯಪ್ ಇಸ್ರೇಲ್‌ನ ಮಿಶಾ ಝಿಲ್ಬರ್‌ಮನ್‌ರನ್ನು 18-21, 21-8, 21-14 ಗೇಮ್‌ಗಳಿಂದ ಸದೆಬಡಿದರು.

 ಪ್ರಣಯ್ ಹಾಗೂ ಕಶ್ಯಪ್ ಎರಡನೇ ಸುತ್ತಿನಲ್ಲಿ ಕ್ರಮವಾಗಿ ಜಪಾನ್‌ನ ಕೆಂಟಾ ನಿಶಿಮೊಟೊ ಹಾಗೂ ತೈಪೆಯ ಚೌ ಟಿಯೆನ್ ಚೆನ್‌ರಿಂದ ಕಠಿಣ ಸವಾಲು ಎದುರಿಸಲಿದ್ದಾರೆ.

64 ನಿಮಿಷಗಳ ಹೋರಾಟದಲ್ಲಿ ಸೌರಭ್ ಭಾರೀ ಹೋರಾಟ ನೀಡಿದರೂ ಜಪಾನ್‌ನ ಕಾಂಟಾ ಸುನೆಯಾಮಾ ವಿರುದ್ಧ 21-23, 19-21, 21-9 ಗೇಮ್‌ಗಳ ಅಂತರದಿಂದ ಶರಣಾದರು.

ಯುವ ಆಟಗಾರ ಶುಭಾಂಕರ್ ಡೇ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಅಗ್ರ ಶ್ರೇಯಾಂಕದ ಹಾಗೂ ವಿಶ್ವದ ನಂ.1 ಆಟಗಾರ ಕೆಂಟೊ ಮೊಮೊಟಾರಿಂದ ವಾಕ್‌ಓವರ್ ಪಡೆದು ಎರಡನೇ ಸುತ್ತಿಗೇರಿದ್ದಾರೆ. ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸಾಯಿ ಉತ್ತೇಜಿತಾ ರಾವ್ ಚೀನಾದ ಚೆನ್ ಕ್ಸಿಯಾವೊ ಕ್ಸಿನ್ ವಿರುದ್ಧ 17-21, 7-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

►ಒಲಿಂಪಿಕ್ಸ್ ಬೆಳ್ಳಿ ವಿಜೇತ ಜೋಡಿಗೆ ರಾಂಕಿರೆಡ್ಡಿ - ಪೊನ್ನಪ್ಪ ಶಾಕ್

 ಒಂದು ಗಂಟೆ ಹಾಗೂ 2 ನಿಮಿಷಗಳ ಕಾಲ ನಡೆದ ಮಹಿಳೆಯರ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಭಾರತದ ಶ್ರೇಯಾಂಕರಹಿತ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಮಲೇಶ್ಯಾದ ಒಲಿಂಪಿಕ್ಸ್ ಬೆಳ್ಳಿ ವಿಜೇತ ಜೋಡಿ ಸೂನ್ ಹಾಗೂ ಯಿಂಗ್ ವಿರುದ್ಧ 21-18, 18-21, 21-17 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ವಿಶ್ವದ ನಂ.23ನೇ ಆಟಗಾರ್ತಿ ಪೊನ್ನಪ್ಪ ಹಾಗೂ ರಾಂಕಿರೆಡ್ಡಿ ಎರಡನೇ ಬಾರಿ ಸೂನ್ ಹಾಗೂ ಯಿಂಗ್ ಎದುರು ಉತ್ತಮ ಪ್ರದರ್ಶನ ನೀಡಿದರು. ಭಾರತದ ಜೋಡಿ ಕಳೆದ ವರ್ಷ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಲೇಶ್ಯಾದ ಎದುರಾಳಿಗಳನ್ನು ಸೋಲಿಸಿದ್ದರು.

ಪೊನ್ನಪ್ಪ ಹಾಗೂ ರಾಂಕಿರೆಡ್ಡಿ ಎರಡನೇ ಸುತ್ತಿನಲ್ಲಿ ಇಂಡೋನೇಶ್ಯದ ಅಲ್ಫಿಯಾನ್ ಎಕೊ ಪ್ರಸೆಟಿಯಾ ಹಾಗೂ ಮಾರ್ಶೆಲ್ಲಾ ಗಿಶ್ಚಾರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News