×
Ad

ರಶ್ಯ ಬಾಕ್ಸಿಂಗ್ ಟೂರ್ನಮೆಂಟ್: ಭಾರತದ ನಾಲ್ವರು ಬಾಕ್ಸರ್‌ಗಳು ಸೆಮಿ ಫೈನಲ್‌ಗೆ

Update: 2019-08-01 22:58 IST

ಹೊಸದಿಲ್ಲಿ, ಆ.1: ಏಶ್ಯನ್ ಚಾಂಪಿಯನ್ ಪೂಜಾ ರಾಣಿ(75ಕೆಜಿ) ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್(69ಕೆಜಿ) ಸಹಿತ ಇತರ ಇಬ್ಬರು ಬಾಕ್ಸರ್‌ಗಳು ರಶ್ಯದಲ್ಲಿ ನಡೆಯುತ್ತಿರುವ ಸಲಾಂ ಉಮಾಖನೊವ್ ಸ್ಮಾರಕ ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಇಂಡಿಯಾ ಓಪನ್ ಚಾಂಪಿಯನ್ ನೀರಜ್(57ಕೆಜಿ) ಹಾಗೂ ವಿಶ್ವ ಯೂತ್ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿರುವ ಜಾನಿ(60ಕೆಜಿ)ಬುಧವಾರ ರಾತ್ರಿ ಸೆಮಿ ಫೈನಲ್‌ಗೆ ತಲುಪಿರುವ ಭಾರತದ ಇನ್ನಿಬ್ಬರು ಬಾಕ್ಸರ್‌ಗಳಾಗಿದ್ದಾರೆ. ಈ ವರ್ಷಾರಂಭದಲ್ಲಿ ಸ್ಟ್ರಾಂಡ್ಜಾ ಸ್ಮಾರಕ ಕಪ್‌ನಲ್ಲಿ ಕಂಚಿನ ಪದಕ ವಿಜೇತೆ ಲವ್ಲೀನಾ ರಶ್ಯದ ಅನಸ್ತಾಸಿಯಾ ಸಿಗವಾರನ್ನು 5-0 ಅಂತರದಿಂದ ಮಣಿಸಿ ಪದಕವನ್ನು ಖಚಿತಪಡಿಸಿದರು. ಲವ್ಲೀನಾ ಸೆಮಿ ಫೈನಲ್ ಸುತ್ತಿನಲ್ಲಿ ಬೆಲಾರಸ್‌ನ ಅಲಿನಾ ವೆಬೆರ್‌ರನ್ನು ಎದುರಿಸಲಿದ್ದಾರೆ.

ಮೇ ತಿಂಗಳಲ್ಲಿ ಇಂಡಿಯಾ ಓಪನ್‌ನಲ್ಲಿ ಆಘಾತಕಾರಿ ಸೋಲನುಭವಿಸಿದ್ದ ಪೂಜಾ ರಶ್ಯದ ಲೌರಾ ಮಮೆಡ್‌ಕುಲೊವಾರನ್ನು 4-1 ಅಂತರದಿಂದ ಸೋಲಿಸಿದರು. ನೀರಜ್ ರಶ್ಯದ ಸಯಾನಾ ಸಗಟಾಯೆವಾರನ್ನು 4-1 ಅಂತರದಿಂದ ಮಣಿಸಿದ್ದಾರೆ.

 ಪಿಂಕಿ ಜಾಂಗ್ರಾ(51ಕೆಜಿ)ಕ್ವಾರ್ಟರ್ ಫೈನಲ್ ಹಂತದಲ್ಲಿ ಸೋತು ಹೊರ ನಡೆದಿರುವ ಭಾರತದ ಏಕೈಕ ಬಾಕ್ಸರ್ ಆಗಿದ್ದಾರೆ. 2018ರ ಇಂಡಿಯಾ ಓಪನ್ ಚಾಂಪಿಯನ್ ಜಾಂಗ್ರಾ ಬೆಲಾರಸ್‌ನ ಯುಲಿಯಾ ಅಪನಸೊವಿಚ್ ವಿರುದ್ಧ 0-5 ಅಂತರದಿಂದ ಸೋತಿದ್ದಾರೆ. ಪುರುಷರ ವಿಭಾಗದ ಬಾಕ್ಸಿಂಗ್‌ನಲ್ಲಿ ಆಶೀಶ್(52ಕೆಜಿ)ಅಝರ್‌ಬೈಜಾನ್‌ನ ಸಲ್ಮಾನ್ ಅಲಿಝಾಡ್‌ರನ್ನು 4-1 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು. ಅಂತಿಮ-8ರ ಸುತ್ತಿನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಗೌರವ್ ಸೋಳಂಕಿ(56ಕೆಜಿ), ಗೋವಿಂದ್ ಸಹಾನಿ(49ಕೆಜಿ) ಹಾಗೂ 2018ರ ಇಂಡಿಯಾ ಓಪನ್ ಚಾಂಪಿಯನ್ ಸಂಜೀತ್(91ಕೆಜಿ)ಅವರನ್ನು ಸೇರಿಕೊಂಡರು. 21ನೇ ಆವೃತ್ತಿಯ ಈ ಟೂರ್ನಮೆಂಟ್‌ನಲ್ಲಿ ಭಾರತದ ಆರು ಪುರುಷರು ಹಾಗೂ ಐವರು ಮಹಿಳಾ ಬಾಕ್ಸರ್‌ಗಳು ಭಾಗವಹಿಸುತ್ತಿದ್ದಾರೆ. 21 ದೇಶಗಳ 200ಕ್ಕೂ ಅಧಿಕ ಬಾಕ್ಸರ್‌ಗಳು ಸ್ಪರ್ಧಾಕಣದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News