ಸೈನಾ, ಶ್ರೀಕಾಂತ್ ಸವಾಲು ಅಂತ್ಯ
ಬ್ಯಾಂಕಾಕ್, ಆ.1: ಭಾರತದ ಹಿರಿಯ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ಥಾಯ್ಲೆಂಡ್ ಓಪನ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.
ಗುರುವಾರ ಇಲ್ಲಿ 48 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್ ನ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಸೈನಾ ಶ್ರೇಯಾಂಕರಹಿತ ಸಯಾಕಾ ತಕಹಶಿ ವಿರುದ್ಧ 21-16, 11-21, 14-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಸುಮಾರು ಎರಡು ತಿಂಗಳ ವಿರಾಮದ ಬಳಿಕ ಸಕ್ರಿಯ ಬ್ಯಾಡ್ಮಿಂಟನ್‌ಗೆ ವಾಪಸಾಗಿದ್ದ ಹೈದರಾಬಾದ್‌ನ ಸೈನಾ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಬೇಗನೆ ಕೊನೆಗೊಳಿಸಿದರು.
ಕೊನೆಯ ಕ್ಷಣದಲ್ಲಿ ಪಿ.ವಿ.ಸಿಂಧು ಟೂರ್ನಿಯಿಂದ ಹಿಂದೆ ಸರಿದಿದ್ದರು. ಇದೀಗ ಸೈನಾ ಸೋತು ನಿರ್ಗಮಿಸಿರುವ ಹಿನ್ನೆಲೆಯಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯವಾಗಿದೆ. ಸೈನಾ ಕೂಡ ಗಾಯದ ಸಮಸ್ಯೆಯಿಂದಾಗಿ ಇಂಡೋನೇಶ್ಯ ಓಪನ್ ಹಾಗೂ ಜಪಾನ್ ಓಪನ್ ಟೂರ್ನಿಗಳಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಶ್ರೀಕಾಂತ್‌ಗೆ ಸೋಲು: ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.10ನೇ ಆಟಗಾರ ಶ್ರೀಕಾಂತ್ ಥಾಯ್ಲೆಂಡ್‌ನ ಖೋಸಿಟ್ ಫೆಟ್‌ಪ್ರದಾಬ್ ವಿರುದ್ಧ 21-11, 16-21, 12-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಶ್ರೀಕಾಂತ್ ಮೊದಲ ಗೇಮ್‌ನ್ನು 21-11 ಅಂತರದಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದಿದ್ದರು. ಆದರೆ, ಥಾಯ್ಲೆಂಡ್ ಆಟಗಾರ ಎರಡನೇ ಹಾಗೂ ಮೂರನೇ ಗೇಮ್‌ನ್ನು ಕ್ರಮವಾಗಿ 21-16 ಹಾಗೂ 21-12 ಗೇಮ್‌ಗಳಿಂದ ಗೆದ್ದುಕೊಂಡು ತಿರುಗೇಟು ನೀಡಿದರು.
ಒಂದು ಗಂಟೆ ಹಾಗೂ ಮೂರು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಶ್ರೀಕಾಂತ್ ಹಾಗೂ ಖೋಸಿಟ್ ನಡುವೆ ತೀವ್ರ ಪೈಪೋಟಿ ಕಂಡು ಬಂದಿದೆ.
ಸಾತ್ವಿಕ್‌ಸಾಯಿರಾಜ್-ಚಿರಾಗ್‌ಗೆ ಜಯ: ಪುರುಷರ ಡಬಲ್ಸ್ ಇವೆಂಟ್‌ನಲ್ಲಿ ಭಾರತ ಶುಭ ಸುದ್ದಿ ಪಡೆದಿದೆ. ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಸಾತ್ವಿಕ್‌ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಇಂಡೋನೇಶ್ಯದ ಫಜರ್ ಅಲಫಿಯಾನ್ ಹಾಗೂ ಮುಹಮ್ಮದ್ ರಿಯಾನ್ ಅರ್ಡಿಯಾಂಟೊ 21-17, 21-19 ನೇರ ಗೇಮ್‌ಗಳ ಅಂತರದಿಂದ ಜಯ ದಾಖಲಿಸಿದರು.
ಭಾರತದ ಜೋಡಿ ಶುಕ್ರವಾರ ನಡೆಯುವ ಅಂತಿಮ-8ರ ಸುತ್ತಿನಲ್ಲಿ ಕೊರಿಯಾದ ಕ್ವಾಲಿಫೈಯರ್ ಚೊಯ್ ಸಾಲ್‌ಗು ಹಾಗೂ ಸಿಯೊ ಸೆವುಂಗ್‌ರನ್ನು ಎದುರಿಸಲಿದ್ದಾರೆ.