ರವಿ ಶಾಸ್ತ್ರಿ ಭಾರತದ ಕೋಚ್ ಆಗಿ ಪುನರಾಯ್ಕೆ ಸಾಧ್ಯತೆ
ಮುಂಬೈ, ಆ.1: ಟೀಮ್ ಇಂಡಿಯಾದ ಈಗಿನ ಕೋಚ್ ರವಿ ಶಾಸ್ತ್ರಿ ಅವರ ಕೋಚ್ ಅವಧಿ ಸೆ.3ರಂದು ಕೊನೆಗೊಳ್ಳಲಿದ್ದರೂ ಅವರು ಕೋಚ್ ಆಗಿ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
2017ರಲ್ಲಿ ರವಿ ಶಾಸ್ತ್ರಿ ಟೀಮ್ ಇಂಡಿಯಾದ ಕೋಚ್ ಆಗಿ ನೇಮಕಗೊಂಡಿದ್ದರು. ಬಿಸಿಸಿಐ ಹೊಸ ಕೋಚ್ ಆಯ್ಕೆಗೆ ಅರ್ಜಿ ಆಹ್ವಾನಿಸಿದ್ದರೂ, ರವಿ ಶಾಸ್ತ್ರಿ ಮತ್ತೆ ಕೋಚ್ ಆಗಿ ಮುಂದುವರಿಯುವ ಆಸಕ್ತಿ ವಹಿಸಿದ್ದಾರೆ. ಕೋಚ್ ಆಯ್ಕೆ ಪ್ರಕ್ರಿಯೆಗೆ ರವಿ ಶಾಸ್ತ್ರಿ ಅರ್ಜಿ ಸಲ್ಲಿಸದೆ ನೇರ ಪ್ರವೇಶ ಪಡೆಯಲಿದ್ದಾರೆ.
ಮಾಜಿ ಆಲ್‌ರೌಂಡರ್, ವೀಕ್ಷಕ ವಿವರಣೆಗಾರ ರವಿ ಶಾಸ್ತ್ರಿ ಅವರಿಗೆ ಕೋಚ್ ಆಗಿ ಪುನರಾಯ್ಕೆಗೊಂಡರೆ 2021 ಟ್ವೆಂಟಿ-20 ವಿಶ್ವಕಪ್ ತನಕ ಕೋಚ್ ಆಗಿ ಮುಂದುವರಿಯಲಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಕೋಚ್ ಹುದ್ದೆಗೆ ಶಾಸ್ತ್ರಿಗೆ ಸವಾಲೊಡ್ಡಲು ಸಮರ್ಥ ಅಭ್ಯರ್ಥಿಗಳಿಲ್ಲ. ಅವರು ಕೋಚ್ ಆಗಿದ್ದಾಗ ಭಾರತ ಆಡಿರುವ ಪಂದ್ಯಗಳಲ್ಲಿ ಶೇ. 70ರಷ್ಟು ಪ್ರಗತಿ ಸಾಧಿಸಿದೆ. ಆಸ್ಟ್ರೇಲಿಯ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಜಯ, ಎರಡು ಏಶ್ಯಾ ಕಪ್ ಪ್ರಶಸ್ತಿಗಳು, ಇತ್ತೀಚೆಗೆ ನಡೆದ ವಿಶ್ವಕಪ್‌ನಲ್ಲಿ ತಂಡ ಗರಿಷ್ಠ ರನ್ ದಾಖಲಿಸಿದೆ. ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್ ಸರಣಿಯಲ್ಲಿ 1-2 ಸೋಲು ಮತ್ತು ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಸೋಲು ಅನುಭವಿಸಿರುವುದು ಶಾಸ್ತ್ರಿ ಕೋಚ್ ಅವಧಿಯಲ್ಲಿನ ಕಪ್ಪು ಚುಕ್ಕೆಯಾಗಿದೆ.
ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಅವಧಿ ಕೊನೆಗೊಂಡಿದ್ದು, ಟಾಮ್ ಮೋಡಿ ಕೋಚ್ ಹುದ್ದೆಯ ಮೇಲೆ ಕಣ್ಣಿಟ್ಟು ಅರ್ಜಿ ಸಲ್ಲಿಸಿದ್ದಾರೆ. ಅವರು ಐಪಿಎಲ್ ಫ್ರಾಂಚೈಸಿ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ಸಿಪಿಎಲ್‌ನ ನಿರ್ದೇಶಕರಾಗಿದ್ದಾರೆ. ಶಾಸ್ತ್ರಿ ಜೊತೆಗೆ ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತೆ ಎರಡು ವರ್ಷಗಳ ಕಾಲ ತಮ್ಮ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಹೊಸ ಬ್ಯಾಟಿಂಗ್ ಕೋಚ್: ಬ್ಯಾಟಿಂಗ್ ಕೋಚ್ ಬದಲಾಗುವ ಸಾಧ್ಯತೆ ಇದೆ. ಈಗಿನ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮುಂದುವರಿಯುವ ಸಾಧ್ಯತೆ ಇಲ್ಲ. ಅವರ ಬದಲಿಗೆ ಬಿಸಿಸಿಐ ಹೊಸ ಅಭ್ಯರ್ಥಿಗೆ ಶೋಧ ನಡೆಸಿದೆ. ಫೀಲ್ಡಿಂಗ್ ಕೋಚ್ ಆಗಿ ಆರ್. ಶ್ರೀಧರ್ ಮುಂದುವರಿಯುವ ಯೋಜನೆಯಲ್ಲಿದ್ದರೂ ಅವರಿಗೆ ದಕ್ಷಿಣ ಆಫ್ರಿಕದ ಫೀಲ್ಡಿಂಗ್ ಲೆಜೆಂಡ್ ಜಾಂಟಿ ರೋಡ್ಸ್ ಸವಾಲೊಡ್ಡಲಿದ್ದಾರೆ. ಈ ಮೊದಲು ಶ್ರೀಲಂಕಾದ ಮಹೇಲ ಜಯವರ್ಧನೆ ಭಾರತ ಕ್ರಿಕೆಟ್ ತಂಡದ ಕೋಚಿಂಗ್ ಬಳಗದಲ್ಲಿ ಸೇರಿಕೊಳ್ಳಲಿದ್ದಾರೆ ಎಂಬ ವದಂತಿ ಕೇಳಿ ಬಂದಿತ್ತು. ಆದರೆ ಅವರು ಇದೀಗ ಆಸಕ್ತಿ ವಹಿಸಿಲ್ಲ. ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಕೋಚ್ ಆಗಿ ಮುಂದುವರಿಯಲಿದ್ದಾರೆ. ಅವರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ ಎಂದು ಮೂಲಗಳು ತಿಳಿಸಿವೆ.