×
Ad

ಭಾರತದ ಡೇವಿಸ್ ಕಪ್ ತಂಡಕ್ಕೆ ಸಾಕಷ್ಟು ಭದ್ರತೆ

Update: 2019-08-01 23:23 IST

ಹೊಸದಿಲ್ಲಿ, ಆ.1: ಇಸ್ಲಾಮಾಬಾದ್‌ನಲ್ಲಿ ಸೆ. 14-15 ರಂದು ನಡೆಯುವ ಡೇವಿಸ್ ಕಪ್‌ನಲ್ಲಿ ಭಾಗವಹಿಸಲಿರುವ ಭಾರತೀಯ ಟೆನಿಸ್ ತಂಡಕ್ಕೆ ಸಾಕಷ್ಟು ಭದ್ರತೆ ಒದಗಿಸುವುದಾಗಿ ಪಾಕಿಸ್ತಾನ ಟೆನಿಸ್ ಒಕ್ಕೂಟ(ಪಿಟಿಎಫ್) ಭರವಸೆ ನೀಡಿದೆ.

ಭಾರತದ ಆಟವಾಡದ ನಾಯಕ ಮಹೇಶ್ ಭೂಪತಿ ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ)ಯನ್ನು ಸಂಪರ್ಕಿಸಿ ಪಾಕಿಸ್ತಾನದ ರಾಜಧಾನಿಯಲ್ಲಿ ನಡೆಯುವ ಡೇವಿಸ್ ಕಪ್‌ಗೆ ಭದ್ರತೆಯ ಭರವಸೆ ನೀಡುವಂತೆ ಆಗ್ರಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಹೀರೊನ್ಮಯ್ ಚಟರ್ಜಿ ಈ ಕುರಿತು ಪಾಕಿಸ್ತಾನ ಟೆನಿಸ್ ಒಕ್ಕೂಟದ ಬಳಿ ತನ್ನ ಆತಂಕವನ್ನು ವ್ಯಕ್ತಪಡಿಸಿದ್ದರು. ‘‘ನೀವು ಎಲ್ಲೇ ಆಡಿದರೂ ಆತಿಥೇಯ ದೇಶ ಇದಕ್ಕೆ ಸಜ್ಜಾಗಿದೆ. ಯಾರೂ ಕೂಡ ಸರಿಯಾದ ಸಿದ್ಧತೆಯಲ್ಲದೆ ಕ್ರೀಡಾ ಸ್ಪರ್ಧೆಯನ್ನು ಏರ್ಪಡಿಸುವುದಿಲ್ಲ. ನಾವು ಸ್ಪರ್ಧೆ ನಡೆಯುವ ಸ್ಥಳದಲ್ಲಿ ಸಾಕಷ್ಟು ಭದ್ರತೆ ನೀಡಲಿದ್ದೇವೆ. ಆದರೆ, ಆ ಬಗ್ಗೆ ಫೋನ್‌ನಲ್ಲಿ ವಿವರಣೆ ನೀಡಲಾರೆ’’ ಎಂದು ಪಿಟಿಎಫ್ ಕಾರ್ಯದರ್ಶಿ ಕರ್ನಲ್(ನಿವೃತ್ತ)ಗುಲ್ ರೆಹಮಾನ್ ಹೇಳಿದ್ದಾರೆ.

ಟೆನಿಸ್ ಆಟಗಾರರು ಪಾಕ್‌ಗೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಯನ್ನು ತಳ್ಳಿ ಹಾಕಿದ ಎಐಟಿಎ, ‘‘ನಾವು ಪಾಕಿಸ್ತಾನದಲ್ಲಿ ಆಡುವಾಗ, ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದಯೇ, ಇಲ್ಲವೇ ಎಂಬ ಆತಂಕ ಉಂಟಾಗುವುದು ಸಹಜ. ಇದರಲ್ಲಿ ಯಾವುದೇ ತಪ್ಪಿಲ್ಲ’’ ಎಂದು ಚಟರ್ಜಿ ಹೇಳಿದ್ದಾರೆ.

ಭಾರತದ ಡೇವಿಸ್ ಕಪ್ ತಂಡ ಸುಮಾರು ಐದು ದಶಕಗಳ ಬಳಿಕ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆ. 1964ರಲ್ಲಿ ಕೊನೆಯ ಬಾರಿ ಪಾಕ್‌ಗೆ ತೆರಳಿತ್ತು. ಉಭಯ ದೇಶಗಳ ಡೇವಿಸ್ ಕಪ್ ತಂಡಗಳು 2006ರಲ್ಲಿ ಮುಂಬೈನಲ್ಲಿ ಕೊನೆಯ ಬಾರಿ ಆಡಿದ್ದವು. ಅದಕ್ಕೂ ಮೊದಲು 1973ರಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಮಲೇಶ್ಯಾ ಆತಿಥ್ಯದಲ್ಲಿ ತಟಸ್ಥ ಸ್ಥಳದಲ್ಲಿ ನಡೆದಿತ್ತು.

ನೆರೆಯ ರಾಷ್ಟ್ರಗಳ ಟೆನಿಸ್ ತಂಡಗಳ ಮಧ್ಯೆ ಏಶ್ಯ-ಒಶಿಯಾನಿಯ ಗ್ರೂಪ್-1 ಪಂದ್ಯ ಇಸ್ಲಾಮಾಬಾದ್‌ನ ಪಾಕಿಸ್ತಾನ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನ ಹುಲ್ಲುಹಾಸಿನ ಅಂಗಣದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News