ನಾಳೆಯಿಂದ ಫ್ಲೋರಿಡಾದಲ್ಲಿ ಟೀಮ್ ಇಂಡಿಯಾ-ವಿಂಡೀಸ್ ಹೋರಾಟ

Update: 2019-08-01 18:05 GMT

ಲೌಡೆರ್‌ಹಿಲ್(ಅಮೆರಿಕ), ಆ.1: ವೆಸ್ಟ್ ಇಂಡೀಸ್ ಮತ್ತು ಭಾರತ ತಂಡಗಳ ನಡುವಿನ ಟ್ವೆಂಟಿ-20 ಸರಣಿಯ ಮೊದಲೆರಡು ಪಂದ್ಯಗಳು ಅಮೆರಿಕದಲ್ಲಿ ನಿಗದಿಯಾಗಿದ್ದು, ಶನಿವಾರ ಮೊದಲ ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ.

 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್‌ನಲ್ಲಿ ಸೋತು ನಿರ್ಗಮಿಸಿದ ಬಳಿಕ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವಿನ ಭಿನ್ನಮತ, ತಂಡದಲ್ಲಿ ಒಗ್ಗಟ್ಟಿಲ್ಲವೆಂಬ ವದಂತಿ ಹಬ್ಬಿತ್ತು. ಇದೀಗ ಎಲ್ಲ ವಿವಾದಗಳಿಗೆ ತೆರೆ ಎಳೆದು ತಂಡವನ್ನು ಬಲಿಷ್ಠವಾಗಿ ಕಟ್ಟಲು ಕೊಹ್ಲಿಗೆ ಉತ್ತಮ ಅವಕಾಶ ದೊರೆಯಲಿದೆ.

ಸರಣಿಯಲ್ಲಿ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳು ಅಮೆರಿಕದಲ್ಲಿ ನಡೆದರೆ ಕೊನೆಯ ಪಂದ್ಯ ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿದೆ.

 ರವಿ ಶಾಸ್ತ್ರಿ ಅವರ ಕೋಚ್ ಅವಧಿ ವೆಸ್ಟ್ ಇಂಡೀಸ್ ಪ್ರವಾಸ ಮುಗಿಯುವ ತನಕ ವಿಸ್ತರಣೆಗೊಂಡಿದ್ದರೂ, ಅವರಿಗೆ ಮತ್ತೆ ಕೋಚ್ ಆಗಿ ಮುಂದುವರಿಯಲು ತನ್ನ ಸಾಧನೆಯನ್ನು ಮುಂದಿಟ್ಟುಕೊಂಡು ಕ್ರಿಕೆಟ್ ಸಲಹಾ ಸಮಿತಿಯ ಮುಂದೆ ಹಕ್ಕು ಮಂಡಿಸಲು ಅವಕಾಶ ಇದೆ.

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಿಲಿಟರಿ ಸೇವೆಯ ಕಾರಣಕ್ಕಾಗಿ ಟೀಮ್ ಇಂಡಿಯಾದಿಂದ ದೂರ ಉಳಿದ ಹಿನ್ನೆಲೆಯಲ್ಲಿ ಕೊಹ್ಲಿಗೆ ವಿಂಡೀಸ್ ವಿರುದ್ಧದ ಸರಣಿ ಸವಾಲಾಗಲಿದೆ.

  

ಟೀಮ್ ಇಂಡಿಯಾಕ್ಕೆ ಪ್ಲೋರಿಡಾದಲ್ಲಿ ಶನಿವಾರ ಮತ್ತು ರವಿವಾರ ನಡೆಯಲಿರುವ ಎರಡು ಟ್ವೆಂಟಿ-20 ಪಂದ್ಯಗಳಲ್ಲಿ ಉತ್ತಮ ಬೆಂಬಲ ದೊರೆಯುವುದನ್ನು ನಿರೀಕ್ಷಿಸಲಾಗಿದೆ. ಮೂರು ವರ್ಷಗಳ ಹಿಂದೆ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಇಲ್ಲಿ ಪಂದ್ಯವನ್ನಾಡಿದ್ದವು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 245 ರನ್ ಗಳಿಸಿತ್ತು. ವೆಸ್ಟ್ ಇಂಡೀಸ್‌ನ ಎವಿನ್ ಲೆವಿಸ್ 49 ಎಸೆತಗಳಲ್ಲಿ ಶತಕ (5ಬೌ,9ಸಿ) ಬಾರಿಸಿದ್ದರು ಮತ್ತು ಜಾನ್ಸನ್ ಚಾರ್ಲ್ಸ್ 79 ರನ್(33ಎ, 6ಬೌ, 7ಸಿ) ಗಳಿಸಿದ್ದರು.

ಇದಕ್ಕೆ ಉತ್ತರವಾಗಿ ಭಾರತ 4 ವಿಕೆಟ್ ನಷ್ಟದಲ್ಲಿ 244 ರನ್ ಗಳಿಸಿ ವೀರೋಚಿತ ಸೋಲುಂಡಿತ್ತು.

ಲೋಕೇಶ್ ರಾಹುಲ್ ಔಟಾಗದೆ 110 ರನ್(51ಎ, 12 ಬೌ, 5ಸಿ), ರೋಹಿತ್ ಶರ್ಮಾ 62 ರನ್(28ಎ, 4ಬೌ,4ಸಿ) , ಮಹೇಂದ್ರ ಸಿಂಗ್ ಧೋನಿ 43 ರನ್ (25ಎ, 2ಬೌ,2ಸಿ) ಗಳಿಸಿದ್ದರೂ ಭಾರತ ಕೇವಲ 1 ರನ್ ಅಂತರದಲ್ಲಿ ಸೋಲು ಅನುಭವಿಸಿತು. ಅಜಿಂಕ್ಯ ರಹಾನೆ (7) ಮತ್ತು ವಿರಾಟ್ ಕೊಹ್ಲಿ(16) ವಿಫಲರಾಗಿದ್ದರು.

ರಾಹುಲ್ ಅದೇ ಪ್ರದರ್ಶನವನ್ನು ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಮತ್ತು ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ತಂಡದ ಸೇವೆಗೆ ಲಭ್ಯರಿಲ್ಲ. ಟೆಸ್ಟ್ ಸರಣಿಗೆ ಬುಮ್ರಾ ವಾಪಸಾಗಲಿದ್ದಾರೆ.

ಸ್ಪೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ವೆಸ್ಟ್ ತಂಡಕ್ಕೆ ಟ್ವೆಂಟಿ-20 ಸರಣಿಗೆ ಲಭ್ಯರಿಲ್ಲ. ಅವರು ಕೆನಡಾದಲ್ಲಿ ಗ್ಲೋಬಲ್ ಟಿ20 ಟೂರ್ನಮೆಂಟ್‌ನಲ್ಲಿ ಆಡುತ್ತಿದ್ದಾರೆ. ಅವರು ಏಕದಿನ ಸರಣಿಯಲ್ಲಿ ಆಡಲಿದ್ದಾರೆ. ಅವರ ಪಾಲಿಗೆ ಇದು ಕೊನೆಯ ಏಕದಿನ ಸರಣಿಯಾಗುವ ಸಾಧ್ಯತೆ ಇದೆ. 39ರ ಹರೆಯದ ಗೇಲ್ ಭಾರತದಲ್ಲಿ 2023ರಲ್ಲಿ ನಡೆಯಲಿರುವ ವರ್ಲ್ಡ್ ಕಪ್ ತನಕ ಆಡುವ ಸಾಧ್ಯತೆ ದೂರವಾಗಿದೆ. ಭಾರತ ಟೆಸ್ಟ್, ಏಕದಿನ ಮತ್ತು ಟ್ವೆಂಟಿ-20 ಸರಣಿಯಲ್ಲಿ ಫೇವರಿಟ್ ಆಗಿ ಕಂಡು ಬಂದರೂ, ತವರಿನಲ್ಲಿ ವಿಂಡೀಸ್ ಹೋರಾಟ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News