×
Ad

ಟಿ-20: ಚೊಚ್ಚಲ ಪಂದ್ಯದ ಮೊದಲ ಓವರ್‌ನಲ್ಲಿ 2 ವಿಕೆಟ್ ಕಬಳಿಸಿದ ಸೈನಿ

Update: 2019-08-03 22:00 IST

ಫ್ಲೋರಿಡಾ, ಆ.3: ನವದೀಪ್ ಸೈನಿ ತಾನಾಡಿದ ಮೊತ್ತ ಮೊದಲ ಅಂತರ್‌ರಾಷ್ಟ್ರೀಯ ಪಂದ್ಯದ ಮೊದಲ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಉರುಳಿಸಿ ಅಪರೂಪದ ಸಾಧನೆ ಮಾಡಿದರು.

 ಅಮೆರಿಕದಲ್ಲಿ ಶನಿವಾರ ನಡೆದ ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಸೈನಿ ಈ ಸಾಧನೆ ಮಾಡಿದರು. ಸೈನಿ ತಾನೆಸೆದ 4ನೆ ಎಸೆತದಲ್ಲಿ ನಿಕೊಲಸ್ ಪೂರನ್‌ರನ್ನು ಕ್ಲೀನ್‌ಬೌಲ್ಡ್ ಮಾಡಿದರು. 5ನೇ ಎಸೆತದಲ್ಲಿ ಶಿಮ್ರ್‌ನ್ ಹೆಟ್ಮೆಯರ್ ವಿಕೆಟ್ ಪಡೆದರು. ಈ ಮೂಲಕ 2 ರನ್‌ಗೆ 2 ವಿಕೆಟ್ ಪಡೆದು ಚೊಚ್ಚಲ ಪಂದ್ಯದಲ್ಲೇ ಮಿಂಚಿದರು.

ಸೈನಿ ತನ್ನ ಮೊದಲ ಟಿ-20 ಓವರ್‌ನಲ್ಲಿ ಎರಡು ವಿಕೆಟ್ ಪಡೆದ ಭಾರತದ 2ನೇ ಬೌಲರ್ ಆಗಿದ್ದಾರೆ. 2009ರಲ್ಲಿ ಬಾಂಗ್ಲಾದೇಶ ವಿರುದ್ಧದ ಟಿ-20ಯಲ್ಲಿ ಪ್ರಗ್ಯಾನ್ ಓಜಾ ತನ್ನ ಮೊದಲ ಟಿ-20 ಓವರ್‌ನಲ್ಲಿ 2 ವಿಕೆಟ್ ಪಡೆದ ಹಿರಿಮೆಗೆ ಪಾತ್ರರಾಗಿದ್ದರು.

 ಸೈನಿ ಕ್ರಿಕೆಟ್‌ನಲ್ಲಿ ಮುಂದುವರಿಯಲು ಗೌತಮ್ ಗಂಭೀರ್ ಪ್ರಮುಖ ಪಾತ್ರವಹಿಸಿದ್ದರು. 6 ವರ್ಷಗಳ ಹಿಂದೆ ಹರ್ಯಾಣದ ಸ್ಥಳೀಯ ಕ್ರಿಕೆಟ್ ಟೂರ್ನಿಗಳಲ್ಲಿ ಟೆನಿಸ್ ಬಾಲ್‌ನಲ್ಲಿ ಆಡುತ್ತಿದ್ದ ಸೈನಿ ಲೆದರ್ ಬಾಲ್ ಕ್ರಿಕೆಟ್‌ನಲ್ಲಿ ಆಡಿರಲಿಲ್ಲ. ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದ ಸೈನಿ ಹಲವರನ್ನು ಪ್ರಭಾವಿತಗೊಳಿಸಿದ್ದರು. ದಿಲ್ಲಿ ರಣಜಿ ತಂಡದಲ್ಲಿ ನೆಟ್ ಪ್ರಾಕ್ಟೀಸ್ ನಡೆಸುವ ಅವಕಾಶ ಪಡೆದರು.

ಈ ಸಂದರ್ಭದಲ್ಲಿ ಗಂಭೀರ್ ಕಣ್ಣಿಗೆ ಬಿದ್ದ ಸೈನಿಗೆ ಗಂಭೀರ್ ಒಂದು ಜೋಡಿ ಶೂ ವ್ಯವಸ್ಥೆ ಮಾಡಿಕೊಟ್ಟರು. ದಿಲ್ಲಿ ನೆಟ್‌ನಲ್ಲಿ ಪ್ರತಿದಿನ ಬರುವಂತೆ ಸೂಚಿಸಿದರು. ಆಯ್ಕೆಗಾರರೊಂದಿಗೆ ವಾಗ್ವಾದ ನಡೆಸಿ ಸೈನಿಗೆ ರಣಜಿ ತಂಡದಲ್ಲಿ ಅವಕಾಶ ಕಲ್ಪಿಸಿದ್ದರು.

 2013-14ರ ಋತುವಿನಲ್ಲಿ ಪ್ರಥಮ ದಜೆ ಕ್ರಿಕೆಟಿಗೆ ಕಾಲಿಟ್ಟ ಸೈನಿ ಆ ಬಳಿಕ ಹಿಂತಿರುಗಿ ನೋಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News