ಇಂಗ್ಲೆಂಡ್‌ಗೆ ಮೊದಲ ಇನಿಂಗ್ಸ್ ಮುನ್ನಡೆ

Update: 2019-08-03 18:00 GMT

ಬರ್ಮಿಂಗ್‌ಹ್ಯಾಮ್, ಆ.3: ಆರಂಭಿಕ ಬ್ಯಾಟ್ಸ್‌ಮನ್ ರೊರಿ ಬರ್ನ್ಸ್ ಚೊಚ್ಚಲ ಶತಕ(133), ನಾಯಕ ಜೋ ರೂಟ್(57) ಹಾಗೂ ಬೆನ್ ಸ್ಟೋಕ್ಸ್(50) ಅರ್ಧಶತಕಗಳ ಕೊಡುಗೆ ನೆರವಿನಿಂದ ಇಂಗ್ಲೆಂಡ್ ತಂಡ ಇಲ್ಲಿ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 90 ರನ್ ಮುನ್ನಡೆ ಸಾಧಿಸಿದೆ.

ಮೂರನೇ ದಿನವಾದ ಶನಿವಾರ 4 ವಿಕೆಟ್‌ಗಳ ನಷ್ಟಕ್ಕೆ 267 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 135.5 ಓವರ್‌ಗಳಲ್ಲಿ 374 ರನ್‌ಗೆ ಆಲೌಟಾಯಿತು.

ಬರ್ನ್ಸ್ ಔಟಾಗದೆ 125 ಹಾಗೂ ಸ್ಟೋಕ್ಸ್ ಔಟಾಗದೆ 38 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದರು. ಈ ಜೋಡಿ 5ನೇ ವಿಕೆಟ್ ಜೊತೆಯಾಟದಲ್ಲಿ 88 ರನ್ ಸೇರಿಸಿತು. ಸ್ಟೋಕ್ಸ್(50, 96 ಎಸೆತ, 8 ಬೌಂಡರಿ) 18ನೇ ಅರ್ಧಶತಕ ಗಳಿಸಿದ ಬೆನ್ನಿಗೇ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು.

ಚೊಚ್ಚಲ ಶತಕ ಸಿಡಿಸಿದ್ದ ಬರ್ನ್ಸ್(133, 312 ಎಸೆತ, 17 ಬೌಂಡರಿ)ನಿನ್ನೆಯ ಮೊತ್ತಕ್ಕೆ ಕೇವಲ 8 ರನ್ ಗಳಿಸಿ ಸ್ಪಿನ್ನರ್ ಲಿಯೊನ್‌ಗೆ ಔಟಾದರು.

 ಈ ಇಬ್ಬರು ಔಟಾದ ಬಳಿಕ ಆಲ್‌ರೌಂಡರ್ ಮೊಯಿನ್ ಅಲಿ(0) ಹಾಗೂ ವಿಕೆಟ್‌ಕೀಪರ್ ಜಾನಿ ಬೈರ್‌ಸ್ಟೋವ್(8) ಬೆನ್ನುಬೆನ್ನಿಗೆ ವಿಕೆಟ್ ಕೈಚೆಲ್ಲಿದರು. ಆಗ ಇಂಗ್ಲೆಂಡ್‌ನ ಸ್ಕೋರ್ 8 ವಿಕೆಟ್‌ಗೆ 300 ರನ್. 9ನೇ ವಿಕೆಟ್ ಜೊತೆಯಾಟದಲ್ಲಿ 65 ರನ್ ಸೇರಿಸಿದ ಕ್ರಿಸ್ ವೋಕ್ಸ್(ಔಟಾಗದೆ 37, 95 ಎಸೆತ) ಹಾಗೂ ಸ್ಟುವರ್ಟ್ ಬ್ರಾಡ್(29) ತಂಡದ ಮೊತ್ತವನ್ನು 365ಕ್ಕೆ ತಲುಪಿಸಿದರು. ಆಸ್ಟ್ರೇಲಿಯದ ಪರ ಕಮಿನ್ಸ್(3-84) ಹಾಗೂ ಲಿಯೊನ್(3-112) ತಲಾ ಮೂರು ವಿಕೆಟ್‌ಗಳು, ಪ್ಯಾಟಿನ್ಸನ್(2-82) ಹಾಗೂ ಸಿಡ್ಲ್(2-82)ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.

ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯ 284 ರನ್‌ಗಳಿಗೆ ಆಲೌಟಾಗಿತ್ತು.

ಸಂಕ್ಷಿಪ್ತ ಸ್ಕೋರ್

►ಆಸ್ಟ್ರೇಲಿಯ ಮೊದಲ ಇನಿಂಗ್ಸ್: 284 ರನ್‌ಗೆ ಆಲೌಟ್

►ಇಂಗ್ಲೆಂಡ್ ಮೊದಲ ಇನಿಂಗ್: 374 ರನ್‌ಗೆ ಆಲೌಟ್

(ಬರ್ನ್ಸ್ 133, ಜೋ ರೂಟ್ 57, ಸ್ಟೋಕ್ಸ್ 50, ವೋಕ್ಸ್ ಔಟಾಗದೆ 37, ಬ್ರಾಡ್ 29, ಕಮಿನ್ಸ್ 3-84, ಲಿಯೊನ್ 3-112, ಪ್ಯಾಟಿನ್ಸನ್ 2-82, ಸಿಡ್ಲ್ 2-82)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News