ಟೆಸ್ಟ್ ಕ್ರಿಕೆಟ್‌ನಿಂದ ಡೇಲ್ ಸ್ಟೇಯ್ನ್ ನಿವೃತ್ತಿ
ಹೊಸದಿಲ್ಲಿ, ಆ.5: ದಕ್ಷಿಣ ಆಫ್ರಿಕದ ವೇಗದ ಬೌಲರ್ ಡೇಲ್ ಸ್ಟೇಯ್ನ್ ಟೆಸ್ಟ್ ಕ್ರಿಕೆಟ್‌ನಿಂದ ಸೋಮವಾರ ನಿವೃತ್ತಿ ಘೋಷಿಸಿದರು.
2004ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿರುವ 36ರ ಹರೆಯದ ಸ್ಟೇಯ್ನ್ ದಕ್ಷಿಣ ಆಫ್ರಿಕದ ಪರ 93 ಪಂದ್ಯಗಳನ್ನು ಆಡಿದ್ದಾರೆ. 22.95ರ ಸರಾಸರಿಯಲ್ಲಿ ಒಟ್ಟು 439 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಸ್ಟೇಯ್ನ್ ನಿರ್ಧಾರವನ್ನು ಕ್ರಿಕೆಟ್ ದಕ್ಷಿಣ ಆಫ್ರಿಕ ದೃಢಪಡಿಸಿದೆ.
‘‘ಮತ್ತೊಂದು ಟೆಸ್ಟ್ ಕ್ರಿಕೆಟ್ ಪಂದ್ಯ ಆಡುವುದಿಲ್ಲ ಎಂದು ಯೋಚಿಸುವುದಕ್ಕೆ ತುಂಬಾ ಕಷ್ಟವಾಗುತ್ತದೆ. ಆದರೆ, ಮತ್ತೊಮ್ಮೆ ಆಡುವುದಿಲ್ಲ ಎಂದು ಯೋಚಿಸುವುದಕ್ಕೆ ಮತ್ತಷ್ಟು ಕಷ್ಟವಾಗುತ್ತದೆ. ವೃತ್ತಿಜೀವನದ ಉಳಿದ ದಿನಗಳಲ್ಲಿ ಏಕದಿನ ಹಾಗೂ ಟಿ-20 ಕ್ರಿಕೆಟ್‌ನತ್ತ ಗರಿಷ್ಠ ಗಮನ ನೀಡುವೆ. ಈ ಕ್ರೀಡೆಯಲ್ಲಿ ಇನ್ನಷ್ಟು ದಿನ ಮುಂದುವರಿಯಲು ಪ್ರಯತ್ನಿಸುವೆ’’ ಎಂದು ಟ್ವಿಟರ್‌ನಲ್ಲಿ ಸ್ಟೇಯ್ನ್ ತಿಳಿಸಿದ್ದಾರೆ.
‘‘ನಾನು ತುಂಬಾ ಇಷ್ಟಪಡುವೆ ಟೆಸ್ಟ್ ಕ್ರಿಕೆಟ್‌ನಿಂದ ಇಂದು ದೂರ ಸರಿಯುತ್ತಿರುವೆ. ನನ್ನ ಪ್ರಕಾರ ಟೆಸ್ಟ್ ಕ್ರಿಕೆಟ್ ಒಂದು ಉತ್ತಮ ಆವೃತ್ತಿಯಾಗಿದೆ. ಇದು ನಿಮ್ಮನ್ನು ಮಾನಸಿಕವಾಗಿ, ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿ ಪರೀಕ್ಷೆಗೆ ಒಳಪಡಿಸುತ್ತದೆ’’ ಎಂದು ಸ್ಟೇಯ್ನ್ ಟ್ವೀಟ್ ಮಾಡಿದ್ದಾರೆ.