ಬೌಲಿಂಗ್ ಕೋಚ್ ಹುದ್ದೆಗೆ ಸುನೀಲ್ ಜೋಶಿ ಅರ್ಜಿ

Update: 2019-08-06 17:13 GMT

ಮುಂಬೈ, ಆ.6: ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಮಾಜಿ ಸ್ಪಿನ್ನರ್ ಸುನೀಲ್ ಜೋಶಿ ಅರ್ಜಿ ಸಲ್ಲಿಸಿದ್ದಾರೆ.

 ಅನಿಲ್ ಕುಂಬ್ಳೆ ಅವರು ನಾಯಕ ವಿರಾಟ್ ಕೊಹ್ಲಿ ಜೊತೆ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕೋಚ್ ಹುದ್ದೆ ತ್ಯಜಿಸಿದ ಬಳಿಕ ಭಾರತ ತಂಡಕ್ಕೆ ಸ್ಪಿನ್ ಸಲಹೆಗಾರರು ಸಿಕ್ಕಿರಲಿಲ್ಲ. ಇದೀಗ ಕನ್ನಡಿಗ ಜೋಶಿ ಆ ಕೊರತೆಯನ್ನು ನಿವಾರಿಸುವ ಯೋಜನೆಯೊಂದಿಗೆ ಬೌಲಿಂಗ್ ಕೋಚ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.

 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಸೋತು ನಿರ್ಗಮಿಸಿದ ಬೆನ್ನಲ್ಲೇ ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಪ್ರಧಾನ ಕೋಚ್ ಹುದ್ದೆ ತ್ಯಜಿಸಿದ್ದರು. ‘‘ನಾನು ಬೌಲಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ಎರಡೂವರೆ ವರ್ಷಗಳ ಕಾಲ ಬಾಂಗ್ಲಾ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ ಬಳಿಕ ಇದೀಗ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲು ತಯಾರಾಗಿರುವೆ. ಭಾರತ ತಂಡದಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಇಲ್ಲ. ಈ ಕೊರತೆಯನ್ನು ನಿವಾರಿಸುವ ಉದ್ದೇಶಕ್ಕಾಗಿ ನನಗೆ ಅವಕಾಶ ದೊರೆಯಬಹುದೆಂಬ ವಿಶ್ವಾಸ ನನಗಿದೆ’’ಎಂದು ಜೋಶಿ ತಿಳಿಸಿದ್ದಾರೆ.

  

ಈ ಮೊದಲು ಜೋಶಿ ಬಾಂಗ್ಲಾ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ವಿಶ್ವಕಪ್ ಕೊನೆಗೊಳ್ಳುವುದರೊಂದಿಗೆ ಜೋಶಿ ಅವರ ಬಾಂಗ್ಲಾ ತಂಡದ ಕೋಚ್ ಅವಧಿ ಕೊನೆಗೊಂಡಿತ್ತು. 49ರ ಹರೆಯದ ಜೋಶಿ ಈ ಹಿಂದೆ ರಣಜಿ ತಂಡದ ಕೋಚ್ ಆಗಿದ್ದರು. 1996ರಿಂದ 2001ರ ತನಕ ಜೋಶಿ ಟೀಮ್ ಇಂಡಿಯಾದ ಪರ ಆಡಿದ್ದರು. 15 ಟೆಸ್ಟ್‌ಗಳಲ್ಲಿ 41 ವಿಕೆಟ್, ಅತ್ಯುತ್ತಮ ಪ್ರದರ್ಶನ 162ಕ್ಕೆ 5 ವಿಕೆಟ್ ಹಾಗೂ 1 ಅರ್ಧಶತಕ( 92ರನ್) ಗಳಿಸಿದ್ದಾರೆ. 69 ಏಕದಿನ ಪಂದ್ಯಗಳಲ್ಲಿ 69 ವಿಕೆಟ್, ಅತ್ಯುತ್ತಮ 6ಕ್ಕೆ 5 ವಿಕೆಟ್, ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 61, ಅರ್ಧಶತಕ 1.

 160 ಪ್ರಥಮ ದರ್ಜೆ ಪಂದ್ಯಗಳಲ್ಲಿ 5,129ರನ್, ವಿಕೆಟ್ 615, ಅತ್ಯುತ್ತಮ 29ಕ್ಕೆ 7, ಶತಕ 4 , ಅರ್ಧಶತಕ 26 , ಗರಿಷ್ಠ ವೈಯಕ್ತಿಕ ಸ್ಕೋರ್ 118.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News