ದ್ವಿತೀಯ ಆ್ಯಶಸ್ ಟೆಸ್ಟ್: ಇಂಗ್ಲೆಂಡ್ ತಂಡ ಆಯ್ಕೆ

Update: 2019-08-09 17:36 GMT

ಲಂಡನ್, ಆ.9: ಇಂಗ್ಲೆಂಡ್ ಕ್ರಿಕೆಟ್ ತಂಡ ಆಸ್ಟ್ರೇಲಿಯ ವಿರುದ್ಧ ಆ್ಯಶಸ್ ಸರಣಿಯ ಎರಡನೇ ಪಂದ್ಯಕ್ಕೆ 12 ಸದಸ್ಯರನ್ನು ಒಳಗೊಂಡ ತಂಡವನ್ನು ಶುಕ್ರವಾರ ಪ್ರಕಟಿಸಿದೆ.

ಮೊಯಿನ್ ಅಲಿ, ಜೇಮ್ಸ್ ಆ್ಯಂಡರ್ಸನ್ ಹಾಗೂ ಒಲ್ಲಿ ಸ್ಟೋನ್‌ರನ್ನು ತಂಡದಿಂದ ಕೈಬಿಡಲಾಗಿದೆ. ಅಲಿ ಕಳಪೆ ಫಾರ್ಮ್‌ಗೆ ಬೆಲೆ ತೆತ್ತಿದ್ದಾರೆ. ಅವರು ಕಳೆದ 8 ಟೆಸ್ಟ್ ಇನಿಂಗ್ಸ್‌ಗಳಲ್ಲಿ ನಾಲ್ಕು ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್ ಮುಂದುವರಿಸಿದ್ದರು. ಅಲಿ ಅವರಿಂದ ತೆರವಾದ ಸ್ಥಾನಕ್ಕೆ ಜಾಕ್ ಲೀಚ್‌ಗೆ ಅವಕಾಶ ನೀಡಲಾಗಿದೆ. ಕಳೆದ ತಿಂಗಳು ಐರ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಲೀಚ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಆ ಪಂದ್ಯದಲ್ಲಿ ನೈಟ್‌ವಾಚ್‌ಮನ್ ಆಗಿ ಬ್ಯಾಟಿಂಗ್‌ಗೆ ಇಳಿದು ಜೀವನಶ್ರೇಷ್ಠ 92 ರನ್ ಗಳಿಸಿದ್ದರು.

ವಿಶ್ವಕಪ್‌ನಲ್ಲಿ ಮಿಂಚಿದ್ದ ಜೋಫ್ರಾ ಅರ್ಚರ್ ಮುಂದಿನ ವಾರ ಚೊಚ್ಚಲ ಪಂದ್ಯ ಆಡಲು ಸಜ್ಜಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಆ್ಯಂಡರ್ಸನ್ ಗಾಯ ಮರುಕಳಿಸಿದ ಕಾರಣ ಮೊದಲ ಟೆಸ್ಟ್‌ನಲ್ಲಿ ಹೆಚ್ಚು ಓವರ್‌ಗಳ ಬೌಲಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಮೊದಲ ಟೆಸ್ ್ಟನಲ್ಲಿ ಆಡಲು ಅವಕಾಶ ಪಡೆಯದ ಸ್ಟೋನ್ ಬೆನ್ನುನೋವಿನ ಕಾರಣದಿಂದ 2ನೇ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ. ಆ್ಯಶಸ್ ಸರಣಿಯ ಎರಡನೇ ಪಂದ್ಯ ಬುಧವಾರ ಆಗಸ್ಟ್ 14 ರಂದು ಲಾರ್ಡ್ಸ್‌ನಲ್ಲಿ ಆರಂಭವಾಗಲಿದೆ. ಆಸ್ಟ್ರೇಲಿಯ ಮೊದಲ ಪಂದ್ಯವನ್ನು 251 ರನ್‌ಗಳ ಅಂತರದಿಂದ ಗೆದ್ದುಕೊಂಡು 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಇಂಗ್ಲೆಂಡ್ ತಂಡ

ಜೋ ರೂಟ್(ನಾಯಕ), ಜೋಫ್ರಾ ಅರ್ಚರ್, ಜಾನಿ ಬೈರ್‌ಸ್ಟೋವ್, ಸ್ಟುವರ್ಟ್ ಬ್ರಾಡ್, ರೊರಿ ಬರ್ನ್ಸ್,ಜೋಸ್ ಬಟ್ಲರ್, ಸ್ಯಾಮ್ ಕರನ್, ಜೋ ಡೆನ್ಲೀ, ಜಾಕ್ ಲೀಚ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News