ನಾಡಾ ವ್ಯಾಪ್ತಿಗೆ ಸೇರಲು ಕೊನೆಗೂ ಒಪ್ಪಿದ ಬಿಸಿಸಿಐ

Update: 2019-08-09 17:57 GMT

 ಹೊಸದಿಲ್ಲಿ, ಆ.9: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕೊನೆಗೂ ರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ಘಟಕ(ನಾಡಾ)ವ್ಯಾಪ್ತಿಗೆ ಸೇರ್ಪಡೆಯಾಗಲು ಒಪ್ಪಿಕೊಂಡಿದ್ದು, ಆರ್ಥಿಕವಾಗಿ ಸ್ವಾಯತ್ತತೆ ಹೊಂದಿದ್ದರೂ ಇದೀಗ ಅಧಿಕೃತವಾಗಿ ರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಲಿದೆ. ನಾಡಾ ಜೊತೆ ಒಪ್ಪಂದ ಮಾಡಿಕೊಳ್ಳುವುದನ್ನು ಬಿಸಿಸಿಐ ತೀವ್ರ ವಿರೋಧಿಸುತ್ತಾ ಬಂದಿತ್ತು. ನಮ್ಮದು ಸ್ವಾಯತ್ತತೆ ಪಡೆದಿರುವ ಸಂಸ್ಥೆ. ರಾಷ್ಟ್ರೀಯ ಕ್ರೀಡಾ ಒಕ್ಕೂಟವಲ್ಲ. ಸರಕಾರದ ಧನಸಹಾಯವನ್ನು ಅವಲಂಬಿಸಿಲ್ಲ ಎಂದು ಹೇಳಿಕೊಳ್ಳುತ್ತಾ ಬಂದಿತ್ತು. ಈ ಮೊದಲು ಸ್ವೀಡನ್ ಮೂಲದ ಅಂತರ್‌ರಾಷ್ಟ್ರೀಯ ಡೋಪಿಂಗ್ ಪರೀಕ್ಷಾ ಸಂಸ್ಥೆ ಕ್ರಿಕೆಟಿಗರ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ರಾಷ್ಟ್ರೀಯ ಡೋಪಿಂಗ್ ಟೆಸ್ಟ್ ಲ್ಯಾಬ್‌ಗೆ ನೀಡುತ್ತಿತ್ತು.

‘‘ನಾಡಾದ ಉದ್ದೀಪನ ದ್ರವ್ಯ ನಿಗ್ರಹ ನೀತಿಯನ್ನು ಗೌರವಿಸುತ್ತೇನೆಂದು ಮಂಡಳಿಯು ಲಿಖಿತ ಭರವಸೆ ನೀಡಿದೆ. ಇನ್ನು ಮುಂದೆ ಎಲ್ಲ ಕ್ರಿಕೆಟಿಗರು ನಾಡಾದಿಂದ ಪರೀಕ್ಷೆಗೆ ಒಳಗಾಗಲಿದ್ದಾರೆ’’ ಎಂದು ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್ ಜುಲಾನಿಯಾ ಹೇಳಿದ್ದಾರೆ.

 ನಾಡಾ ಡಿಜಿ ನವೀನ್ ಅಗರ್ವಾಲ್ ಜೊತೆ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಹಾಗೂ ಮಂಡಳಿಯ ಜಿಎಂ(ಕ್ರಿಕೆಟ್ ಚಟುವಟಿಕೆ)ಸಾಬಾ ಕರೀಂರನ್ನು ಶುಕ್ರವಾರ ಭೇಟಿಯಾದ ಬಳಿಕ ರಾಧೇಶ್ಯಾಮ್ ಈ ಹೇಳಿಕೆ ನೀಡಿದ್ದಾರೆ.

ಕೇಂದ್ರ ಸರಕಾರದ ನಿಯಮದ ಪ್ರಕಾರ ಬಿಸಿಸಿಐ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಸೇರಬೇಕೆಂಬ ಕುರಿತು ಭಾರೀ ಒತ್ತಡವನ್ನು ಎದುರಿಸುತ್ತಿತ್ತು. ಹೀಗಾಗಿ ಈ ಬೆಳವಣಿಗೆಯು ನಿರೀಕ್ಷಿತವಾಗಿತ್ತು.

       ‘‘ಡೋಪಿಂಗ್ ಪರೀಕ್ಷೆಯ ಕಿಟ್‌ಗಳು, ವೈದ್ಯರ ಅರ್ಹತೆ ಹಾಗೂ ಮಾದರಿ ಸಂಗ್ರಹದ ಕುರಿತಂತೆ ಬಿಸಿಸಿಐ ನಮ್ಮ ಬಳಿ ಆತಂಕ ವ್ಯಕ್ತಪಡಿಸಿತ್ತು. ನೀವು ಯಾವ ರೀತಿಯ ವ್ಯವಸ್ಥೆಗಳನ್ನು ಬಯಸುತ್ತೀರೋ ಅದನ್ನು ಪೂರೈಸುತ್ತೇವೆಂದು ನಾವು ಭರವಸೆ ನೀಡಿದ್ದೇವೆ.ಆದರೆ, ಇದಕ್ಕೆ ಸ್ವಲ್ಪ ಶುಲ್ಕ ತಗಲಲಿದೆ. ಎಲ್ಲ ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳಿಗೆ ಉನ್ನತ ಮಟ್ಟದ ಸೌಕರ್ಯಗಳು ಸಮಾನವಾಗಿರುತ್ತದೆ. ಇತರರಿಗಿಂತ ಬಿಸಿಸಿಐ ಭಿನ್ನವಾಗದು. ಕ್ರಿಕೆಟ್ ಮಂಡಳಿಯು ದೇಶದ ಕಾನೂನನ್ನು ಪಾಲಿಸಬೇಕಾಗುತ್ತದೆ’’ ಎಂದು ರಾಧೇಶ್ಯಾಂ ಹೇಳಿದ್ದಾರೆ.

 ‘‘ಬಿಸಿಸಿಐ ನೆಲದ ಕಾನೂನನ್ನು ಒಪ್ಪುತ್ತದೆ. ಡೋಪಿಂಗ್ ಪರೀಕ್ಷೆಗೆ ಸಂಬಂಧಿಸಿ ನಾವು ಕೆಲವು ವಿಚಾರವನ್ನು ಎತ್ತಿದ್ದೆವು. ಉನ್ನತ ಮಟ್ಟದ ಪರೀಕ್ಷೆಗೆ ವಿವಿಧ ರೀತಿಯ ವೆಚ್ಚವನ್ನು ಭರಿಸಲು ನಾವು ಒಪ್ಪಿಕೊಂಡಿದ್ದೇವೆ’’ ಎಂದು ರಾಹುಲ್ ಜೊಹ್ರಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ಮಾರ್ಚ್‌ನಲ್ಲಿ ನಾಡಾ ಹಾಗೂ ಐಸಿಸಿಯೊಂದಿಗೆ ಷರತ್ತುಬದ್ಧ ತ್ರಿಪಕ್ಷೀಯ ಒಪ್ಪಂದಕ್ಕೆ ಬರಲು ಬಿಸಿಸಿಐ ಒಪ್ಪಿಕೊಂಡಿತ್ತು. ಆದಾಗ್ಯೂ ಸಚಿವಾಲಯದ ಒಪ್ಪಿಗೆ ಇಲ್ಲದೆ ಕ್ರಿಕೆಟ್ ಮಂಡಳಿಯು ಸರಕಾರಿ ಸಂಸ್ಥೆಯೊಂದಿಗೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಲು ಸಾಧ್ಯವಿಲ್ಲ ಎಂದು ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್ ಸ್ಪಷ್ಟಪಡಿಸಿದ್ದರು.

ಕ್ರಿಕೆಟಿಗರು ಯಾವಾಗ, ಎಲ್ಲಿ ಬಯಸಿದರೂ ನಾಡಾ ಪರೀಕ್ಷೆ ನಡೆಸಲಿದೆ

► ಕ್ರೀಡಾ ಕಾರ್ಯದರ್ಶಿ

ಹೊಸದಿಲ್ಲಿ, ಆ.9: ‘‘ಕ್ರಿಕೆಟಿಗರು ಯಾವಾಗ ಹಾಗೂ ಎಲ್ಲಿ ಬಯಸಿದರೂ ಅಲ್ಲಿಯೇ ಡೋಪಿಂಗ್ ಪರೀಕ್ಷೆ ನಡೆಸಲು ರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ಘಟಕ(ನಾಡಾ)ಸಿದ್ಧವಾಗಿದೆ. ಬಿಸಿಸಿಐಗೆ ದೇಶದ ಕಾನೂನನ್ನು ಗೌರವಿಸದೆ ಬೇರೆ ಆಯ್ಕೆಯಿಲ್ಲ’’ ಎಂದು ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್ ಜುಲಾನಿಯಾ ಹೇಳಿದ್ದಾರೆ.

ಈ ತನಕ ಸ್ವೀಡನ್ ಮೂಲದ ಅಂತರ್‌ರಾಷ್ಟ್ರೀಯ ಡೋಪಿಂಗ್ ಟೆಸ್ಟ್ ಮ್ಯಾನೇಜ್‌ಮೆಂಟ್(ಐಡಿಟಿಎಂ)ಕ್ರಿಕೆಟಿಗರ ಮಾದರಿಯನ್ನು ಸಂಗ್ರಹಿಸಿ ರಾಷ್ಟ್ರೀಯ ಡೋಪಿಂಗ್ ಟೆಸ್ಟ್ ಲ್ಯಾಬೊರೇಟರಿಗೆ(ಎನ್‌ಡಿಟಿಎಲ್)ನೀಡುತ್ತಿತ್ತು. ‘‘ಐಡಿಟಿಎಂ ವಿದೇಶದ ಏಜೆನ್ಸಿಯಾಗಿದ್ದು, ಬಿಸಿಸಿಐ ಸ್ಯಾಂಪಲ್ ಸಂಗ್ರಹಕ್ಕಾಗಿ ಈ ಸಂಸ್ಥೆಯನ್ನು ನೇಮಿಸಿಕೊಂಡಿತ್ತು. ಇನ್ನು ಮುಂದೆ ನಾಡಾ ಈ ಕೆಲಸವನ್ನು ಮಾಡಲಿದೆ. ನಿಮಗೆ ಕಾನೂನು ಪಾಲಿಸುವ ವಿವೇಚನೆ ಇಲ್ಲವೇ ಇಲ್ಲ ಎಂದು ಬಿಸಿಸಿಐಗೆ ನಾನು ವಿವರಿಸಿದ್ದೇನೆ. ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೆ’’ ಎಂದು ರಾಧೇಶ್ಯಾಮ್ ಹೇಳಿದ್ದಾರೆ.

ನಾಡಾ ತಾನು ಬಯಸಿದಂತೆ ಯಾವಾಗ ಹಾಗೂ ಎಲ್ಲಿ ಕೂಡಾ ಡೋಪಿಂಗ್ ಪರೀಕ್ಷೆಯನ್ನು ನಡೆಸಬಹುದು. ವಿಶ್ವ ಉದ್ದೀಪನ ಮದ್ದು ನಿಗ್ರಹ ಘಟಕ(ವಾಡಾ)ದ 5.2 ಷರತ್ತು ನಾಡಾ ತನ್ನ ಪ್ರದೇಶದಲ್ಲಿ ಅಥ್ಲೀಟ್‌ಗಳ ದೇಶವನ್ನು ನೋಡದೆ ಪರೀಕ್ಷೆ ನಡೆಸುವ ಅಧಿಕಾರವನ್ನು ಹೊಂದಿದೆ ಎಂದು ಕ್ರೀಡಾ ಸಚಿವಾಲಯದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News