ವೀಸಾಕ್ಕಾಗಿ ತಡವಾಗಿ ಅರ್ಜಿ ಸಲ್ಲಿಸಿದ ದ್ಯುತಿ ಐರ್ಲೆಂಡ್, ಜರ್ಮನಿ ಪ್ರವಾಸ ಡೋಲಾಯಮಾನ

Update: 2019-08-09 18:12 GMT

ಹೊಸದಿಲ್ಲಿ, ಆ.9: ವೀಸಾ ಅರ್ಜಿ ಪ್ರಕ್ರಿಯೆ ವಿಳಂಬವಾದ ಕಾರಣ ಟೂರ್ನಮೆಂಟ್‌ಗಳಲ್ಲಿ ಸ್ಪರ್ಧಿಸಲು ಐರ್ಲೆಂಡ್ ಹಾಗೂ ಜರ್ಮನಿಗೆ ಪ್ರಯಾಣಿಸುವ ತನ್ನ ಯೋಜನೆ ಡೋಲಾಯಮಾನವಾಗಿದೆ. ವಿದೇಶಾಂಗ ಸಚಿವಾಲಯ ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ಖ್ಯಾತ ಅಥ್ಲೀಟ್ ದ್ಯುತಿ ಚಂದ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

  ‘‘ಐರ್ಲೆಂಡ್ ಹಾಗೂ ಜರ್ಮನಿಯಲ್ಲಿ ಕ್ರಮವಾಗಿ ಆಗಸ್ಟ್ 13 ಹಾಗೂ 19 ರಂದು ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಯಸಿದ್ದೇನೆ. ನಾನು ಕೆಲವೇ ದಿನಗಳ ಹಿಂದೆ ಭುವನೇಶ್ವರದ ಕಳಿಂಗ ಕೈಗಾರಿಕಾ ತಾಂತ್ರಿಕ ಸಂಸ್ಥೆಯ ನಿರ್ದೇಶಕರ ಕಚೇರಿಯ ಮೂಲಕ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಈ ಎರಡು ದೇಶಗಳ ಪ್ರವಾಸ ಭಾರತದ ಅಥ್ಲೆಟಿಕ್ಸ್ ಒಕ್ಕೂಟ(ಎಎಫ್‌ಐ) ಹಾಗೂ ಭಾರತ ಕ್ರೀಡಾ ಪ್ರಾಧಿಕಾರ(ಸಾಯ್)ಸಲ್ಲಿಸಿರುವ ವೇಳಾಪಟ್ಟಿಯಲ್ಲಿಲ್ಲ’’ ಎಂದು ಚಂದ್ ಹೇಳಿದ್ದಾರೆ. ದ್ಯುತಿ ಚಂದ್ ಕೋಚ್ ಎನ್.ರಮೇಶ್ ಕಳೆದ ವಾರ ಈ ಎರಡು ದೇಶಗಳಿಗೆ ತೆರಳಿ ಟೂರ್ನಿಯಲ್ಲಿ ಆಡುವ ಯೋಜನೆ ರೂಪಿಸಿದ್ದರು. ಈ ಟೂರ್ನಿಯ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ದ್ಯುತಿ ನಿರ್ಣಾಯಕ ಅಂಕ ಗಳಿಸಬಹುದಾಗಿದೆ.

‘‘ನಾವು ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ. ಅರ್ಜಿ ಸಲ್ಲಿಕೆ ಸ್ವಲ್ಪ ವಿಳಂಬವಾಗಿದೆ. ವಿಳಂಬಕ್ಕೆ ನಿಜವಾದ ಕಾರಣ ಏನೆಂದು ನನಗೆ ಗೊತ್ತಿಲ್ಲ. ಕಳಿಂಗ ಕೈಗಾರಿಕಾ ತಾಂತ್ರಿಕ ಸಂಸ್ಥೆಯ ನಿರ್ದೇಶಕ ಗಗನ್‌ನೆಂದು ದಾಸ್‌ಗೆ ಎಲ್ಲವೂ ಗೊತ್ತಿದೆ. ಈ ಟೂರ್ನಮೆಂಟ್‌ಗಳು ನನಗೆ ಅತ್ಯಂತ ಮುಖ್ಯವಾಗಿದೆ’’ ಎಂದು ದ್ಯುತಿ ಚಂದ್ ಹೇಳಿದ್ದಾರೆ.

ಎರಡೂ ಟೂರ್ನಮೆಂಟ್‌ಗಳು ದ್ಯುತಿಗೆ ಅತ್ಯಂತ ಮುಖ್ಯವಾಗಿದೆ. 100 ಮೀ.ನಲ್ಲಿ ಒಲಿಂಪಿಕ್ಸ್ ಅರ್ಹತಾ ಸಮಯ 11.15 ಸೆಕೆಂಡ್ ಹಾಗೂ 200 ಮೀ. ಓಟಕ್ಕೆ 22.80 ಸೆಕೆಂಡ್ ಆಗಿದೆ. ‘‘ದ್ಯುತಿ ಅವರ 100 ಮೀ. ಓಟದಲ್ಲಿ ವೈಯಕ್ತಿಕ ಶ್ರೇಷ್ಠ ಸಮಯ 11.24 ಸೆ. ಹಾಗೂ 200 ಮೀ.ನಲ್ಲಿ 23.00 ಸೆಕೆಂಡ್ ಆಗಿದೆ.ಈ ಎರಡು ದಾಖಲೆ ಮುರಿಯುವುದು ಅಸಾಧ್ಯ. ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ದ್ಯುತಿ ಅರ್ಹತೆ ಪಡೆಯಬೇಕಾದರೆ, ದ್ಯುತಿಯ ಜಾಗತಿಕ ರ್ಯಾಂಕಿಂಗ್ ಉತ್ತಮವಾಗಬೇಕಾಗಿದೆ’’ ಎಂದು ಎಎಫ್‌ಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News