ರೋಜರ್ಸ್ ಕಪ್: ನಡಾಲ್ ಕ್ವಾ. ಫೈನಲ್‌ಗೆ ಲಗ್ಗೆ

Update: 2019-08-09 18:19 GMT

ಮಾಂಟ್ರಿಯಲ್, ಆ.9: ಹಾಲಿ ಚಾಂಪಿಯನ್ ರಫೆಲ್ ನಡಾಲ್ ರೋಜರ್ಸ್ ಕಪ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಇಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ನಡಾಲ್‌ಅರ್ಜೆಂಟೀನದ ಗುಡೊ ಪೆಲ್ಲಾರನ್ನು 6-3, 6-4 ನೇರ ಸೆಟ್‌ಗಳಿಂದ ಮಣಿಸಿದರು.

ನಡಾಲ್ ಕಳೆದ ವರ್ಷ ನಾಲ್ಕನೇ ಬಾರಿ ರೋಜರ್ಸ್ ಕಪ್‌ನ್ನು ಜಯಿಸಿದ್ದರು. ಕಳೆದ ತಿಂಗಳು ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ರೋಜರ್ ಫೆಡರರ್ ವಿರುದ್ದ ಸೋತ ಬಳಿಕ ಮೊದಲ ಪಂದ್ಯ ಆಡಿದ್ದಾರೆ.

33ರ ಹರೆಯದ ನಡಾಲ್ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಡೇನಿಯಲ್ ಎವನ್ಸ್ ರನ್ನು ಮಣಿಸಿದ್ದರು. ನಡಾಲ್ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಏಳನೇ ಶ್ರೇಯಾಂಕದ ಫ್ಯಾಬಿಯೊ ಫೊಗ್ನಿನಿ ಅವರನ್ನು ಎದುರಿಸಲಿದ್ದಾರೆ. ಇಟಲಿಯ ಫೋಗ್ನಿನಿ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಫ್ರಾನ್ಸ್ ತಂಡದ ಅಡ್ರಿಯಾನ್ ಮನ್ನರಿನೊರನ್ನು 6-2, 7-5 ಸೆಟ್‌ಗಳ ಅಂತರದಿಂದ ಸೋಲಿಸಿದರು.

 ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಆಸ್ಟ್ರೀಯದ 2ನೇ ಶ್ರೇಯಾಂಕದ ಡೊಮಿನಿಕ್ ಥೀಮ್ ಕ್ರೊಯೇಶಿಯದ ಮರಿನ್ ಸಿಲಿಕ್‌ರನ್ನು 7-6(7), 6-4 ಸೆಟ್‌ಗಳ ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು. ಥೀಮ್ ಅಂತಿಮ-8ರ ಸುತ್ತಿನಲ್ಲಿ ರಶ್ಯದ 8ನೇ ಶ್ರೇಯಾಂಕದ ಡ್ಯಾನಿಲ್ ಮೆಡ್ವೆಡೆವ್‌ರನ್ನು ಎದುರಿಸಲಿದ್ದಾರೆ. ಮಡ್ವೆಡೆವ್ ಚಿಲಿಯ ಕ್ರಿಸ್ಟಿಯನ್ ಗರಿನ್‌ರನ್ನು 6-3, 6-3 ಸೆಟ್‌ಗಳ ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದರು.

► ಖಚನೊವ್, ಝ್ವೆರೆವ್ ಕ್ವಾರ್ಟರ್ ಫೈನಲ್‌ಗೆ

ರಶ್ಯದ ಆರನೇ ಶ್ರೇಯಾಂಕದ ಕರೆನ್ ಖಚನೊವ್ ಕೆನಡಾದ 19ರ ಹರೆಯದ ಬಾಲಕ ಫೆಲಿಕ್ಸ್ ಅಗೆರ್-ಅಲಿಯಾಸಿಮ್‌ರನ್ನು 6-7(7), 7-5, 6-3 ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದರು. ಮೂರನೇ ಶ್ರೇಯಾಂಕದ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಜಾರ್ಜಿಯದ ನಿಕೊಲಝ್ ಬಾಸಿಲಾಶ್ವಿಲಿ ಅವರನ್ನು 7-5, 5-7, 7-6(5) ಸೆಟ್‌ಗಳಿಂದ ಸೋಲಿಸಿದರು. ಅಂತಿಮ-8ರ ಸುತ್ತಿನಲ್ಲಿ ರಶ್ಯದ ಖಚನೊವ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News