ಮೊದಲ ಏಕದಿನ ಮಳೆಗಾಹುತಿ

Update: 2019-08-09 18:20 GMT

ಜಾರ್ಜ್‌ಟೌನ್, ಆ.9: ವೆಸ್ಟ್‌ಇಂಡೀಸ್ ವಿರುದ್ಧ ಗುರುವಾರ ನಡೆಯಬೇಕಾಗಿದ್ದ ಮೊದಲ ಏಕದಿನ ಪಂದ್ಯ ಮಳೆಗಾಹುತಿಯಾಗಿರುವುದಕ್ಕೆ ಭಾರತದ ನಾಯಕ ವಿರಾಟ್ ಕೊಹ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಳೆ ಅಡ್ಡಿ ಕ್ರಿಕೆಟ್‌ನ ಅತ್ಯಂತ ಕೆಟ್ಟ ಭಾಗವಾಗಿದೆ ಎಂದಿದ್ದಾರೆ.

ಗುರುವಾರದ ಪಂದ್ಯ ಮಳೆಯಿಂದಾಗಿ 90 ನಿಮಿಷಗಳ ಕಾಲ ತಡವಾಗಿ ಆರಂಭವಾಗಿತ್ತು. ಹಲವು ಬಾರಿ ಮಳೆ ಅಡ್ಡಿಪಡಿಸಿದ ಬಳಿಕ ಕೇವಲ 13 ಓವರ್‌ಗಳ ಪಂದ್ಯ ಆಡಲು ಸಾಧ್ಯವಾಗಿತ್ತು. ಮೊದಲಿಗೆ ಪಂದ್ಯವನ್ನು 43 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಎರಡು ಬಾರಿ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದಾಗ ಅಂತಿಮವಾಗಿ ಪಂದ್ಯ ರದ್ದುಪಡಿಸಲಾಯಿತು. ಆಗ ವೆಸ್ಟ್ ಇಂಡೀಸ್ 1 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತ್ತು.

‘‘ಇದು ಬಹುಶಃ ಕ್ರಿಕೆಟ್‌ನ ಒಂದು ಕೆಟ್ಟ ಭಾಗವಾಗಿದೆ. ಪಂದ್ಯ ಪದೇ ಪದೇ ನಿಂತು ಆರಂಭವಾಗುವುದು ಒಳ್ಳೆಯದಲ್ಲ. ಇದರಿಂದ ಆಟಗಾರರು ಗಾಯಗೊಳ್ಳುವ ಸಾಧ್ಯತೆ ಜಾಸ್ತಿ. ವೆಸ್ಟ್‌ಇಂಡೀಸ್‌ನ ಕೆಲವು ಪಿಚ್‌ಗಳಲ್ಲಿ ಉತ್ತಮ ವೇಗ ಹಾಗೂ ಬೌನ್ಸ್ ಇದೆ. ಇನ್ನು ಕೆಲವು ಸ್ವಲ್ಪ ನಿಧಾನವಾಗಿದ್ದು, ಬ್ಯಾಟಿಂಗ್‌ಗೆ ಕಷ್ಟಕರವಾಗಿದೆ. ನಾವು ಇದನ್ನು ಪರಿಶೀಲಿಸಿ, ಕ್ರಮಬದ್ಧವಾಗಿ ಆಡುತ್ತೇವೆ’’ ಎಂದು ಪಂದ್ಯ ಬಳಿಕದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಅಭಿಪ್ರಾಯಪಟ್ಟರು.

ಭಾರತ ಹಾಗೂ ವೆಸ್ಟ್‌ಇಂಡೀಸ್ ರವಿವಾರ ಪೋರ್ಟ್ ಆಫ್ ಸ್ಪೇನ್‌ನಲ್ಲಿ ರವಿವಾರ ಎರಡನೇ ಏಕದಿನ ಪಂದ್ಯವನ್ನು ಆಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News