ಪಾಕಿಸ್ತಾನದ ಮುಖ್ಯ ಕೋಚ್ ಹುದ್ದೆಯ ಸ್ಪರ್ಧೆಯಲ್ಲಿ ಮಿಸ್ಬಾವುಲ್‌ಹಕ್?

Update: 2019-08-10 17:47 GMT

ಕರಾಚಿ, ಆ.10: ಈ ವರ್ಷದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ತಂಡದಲ್ಲಿ ಸಮಗ್ರ ಬದಲಾವಣೆಗೆ ಪಿಸಿಬಿ ಮುಂದಾಗಿದೆ. ವಿಶ್ವಕಪ್‌ನಲ್ಲಿ ಪಾಕ್ ತಂಡ ಎರಡನೇ ಸುತ್ತಿಗೆ ಅರ್ಹತೆ ಪಡೆಯಲು ವಿಫಲವಾದ ಕಾರಣ ಕ್ರಿಕೆಟ್ ಮಂಡಳಿಯು ಕೋಚ್ ಮಿಕಿ ಅರ್ಥರ್ ಅವರ ಗುತ್ತಿಗೆ ಅವಧಿಯನ್ನು ವಿಸ್ತರಿಸಿಲ್ಲ. ಹೀಗಾಗಿ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ)ನೂತನ ಮುಖ್ಯ ಕೋಚ್ ಅಭ್ಯರ್ಥಿಯ ತಲಾಶೆಯಲ್ಲಿದೆ.

ದಕ್ಷಿಣ ಆಫ್ರಿಕದ ಅರ್ಥರ್ ಪಾಕ್ ತಂಡದೊಂದಿಗೆ ಇನ್ನೆರಡು ವರ್ಷಗಳ ಕಾಲ ಕೋಚ್ ಆಗಿರಲು ಬಯಸಿದ್ದರು. ಆದರೆ, ಕ್ರಿಕೆಟ್ ಮಂಡಳಿಯು ಅರ್ಥರ್ ಹಾಗೂ ಅವರ ಕೋಚಿಂಗ್ ಸಿಬ್ಬಂದಿಯನ್ನು ಹುದ್ದೆಯಿಂದ ಕಿತ್ತುಹಾಕಿದೆ.

ಪಾಕಿಸ್ತಾನದ ಮಾಜಿ ಹಾಗೂ ಹಾಲಿ ಕ್ರಿಕೆಟಿಗರಿಂದ ಬಹಳಷ್ಟು ಗೌರವಿಸಲ್ಪಡುತ್ತಿರುವ ಮಾಜಿ ನಾಯಕ ಮಿಸ್ಬಾವುಲ್ ಹಕ್ ಪಾಕ್‌ನ ಹೊಸ ಮುಖ್ಯ ಕೋಚ್ ಹುದ್ದೆಯ ಸ್ಪರ್ಧೆಯಲ್ಲಿರುವ ಪ್ರಮುಖ ಅಭ್ಯರ್ಥಿಯಾಗಿದ್ದಾರೆ ಎಂದು ನ್ಯೂಸ್ ಡಾಟ್‌ಕಾಮ್‌ಡಾಟ್‌ಪಿಕೆ ವರದಿ ಮಾಡಿದೆ.

ಪಾಕ್‌ನ ಹಿರಿಯ ಕ್ರಿಕೆಟಿಗ ಹಕ್‌ಗೆ ಯಾವುದೇ ತಂಡಕ್ಕೆ ಕೋಚ್ ನೀಡಿದ ಅನುಭವವಿಲ್ಲ. ಒಂದು ವೇಳೆ ಪಾಕ್ ಕ್ರಿಕೆಟ್‌ನ ಕೋಚ್ ಆಗಿ ಆಯ್ಕೆಯಾದರೆ ಇದು ಅವರ ಮೊದಲ ಮಹತ್ವದ ಹುದ್ದೆ ಎನಿಸಿಕೊಳ್ಳಲಿದೆ.

2017ರಲ್ಲಿ ವೆಸ್ಟ್‌ಇಂಡೀಸ್ ಪ್ರವಾಸದ ವೇಳೆ ಯೂನಿಸ್ ಖಾನ್ ಜೊತೆ ಮಿಸ್ಬಾವುಲ್ ಹಕ್ ಕೂಡ ನಿವೃತ್ತಿ ಘೋಷಿಸಿದ್ದರು. ನಿವೃತ್ತಿಗೆ ಮೊದಲು ಪಾಕ್ ಪರ 75 ಟೆಸ್ಟ್, 162 ಏಕದಿನ ಹಾಗೂ 29 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದರು. 56 ಟೆಸ್ಟ್ ಪಂದ್ಯಗಳಲ್ಲಿ ಪಾಕ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಹಕ್ 26 ಪಂದ್ಯಗಳಲ್ಲಿ ಜಯ ಹಾಗೂ 19ರಲ್ಲಿ ಸೋಲು ಹಾಗೂ ಒಟ್ಟು 11 ಟೆಸ್ಟ್ ಪಂದ್ಯಗಳು ಡ್ರಾ ಸಾಧಿಸಲು ನೆರವಾಗಿದ್ದಾರೆ. ಪಾಕ್ ಮುಖ್ಯ ಕೋಚ್ ಹುದ್ದೆಗೆ ಹಕ್ ಹೆಸರಲ್ಲದೆ, ನ್ಯೂಝಿಲ್ಯಾಂಡ್‌ನ ಮೈಕ್ ಹೆಸನ್ ಹೆಸರೂ ಕೂಡ ಕೇಳಿಬರುತ್ತಿದೆ. ನ್ಯೂಝಿಲ್ಯಾಂಡ್‌ನ ಮುಖ್ಯ ಕೋಚ್ ಆಗಿ ಹೆಸನ್ ಹೆಸರುವಾಸಿಯಾಗಿದ್ದರು. ಹೆಸನ್ ಮಾರ್ಗದರ್ಶನದಲ್ಲಿ 2015ರಲ್ಲಿ ನ್ಯೂಝಿಲ್ಯಾಂಡ್ ಫೈನಲ್‌ಗೆ ತಲುಪಿತ್ತು. ಮಿಸ್ಬಾವುಲ್ ಹಕ್ ಈಗಿನ ಪಾಕ್ ತಂಡದಲ್ಲಿರುವ ಹೆಚ್ಚಿನೆಲ್ಲಾ ಆಟಗಾರರೊಂದಿಗೆ ಆಡಿದ್ದು, ಅವರೆಲ್ಲರ ಪರಿಚಯವಿದೆ. ಪಿಸಿಬಿ ಶ್ರೀಲಂಕಾ ವಿರುದ್ಧ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸರಣಿಗೆ ಮೊದಲು ಮುಖ್ಯ ಕೋಚ್ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News