ಭಾರತದ ಹಾಕಿ ತಂಡ ಟೋಕಿಯೊಗೆ ಪಯಣ

Update: 2019-08-11 18:20 GMT

ಬೆಂಗಳೂರು, ಆ.11: ಈ ವರ್ಷಾಂತ್ಯದಲ್ಲಿ ನಡೆಯುವ ಒಲಿಂಪಿಕ್ಸ್ ಕ್ವಾಲಿಫೈಯರ್‌ನ ಮೇಲೆ ಕಣ್ಣಿಟ್ಟಿರುವ ಭಾರತೀಯ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು ಟೆಸ್ಟ್ ಇವೆಂಟ್‌ಗಳಲ್ಲಿ ಭಾಗವಹಿಸಲು ರವಿವಾರ ಟೋಕಿಯೊಗೆ ಪ್ರಯಾಣ ಬೆಳೆಸಿವೆ.

ಒಲಿಂಪಿಕ್ಸ್ ಟೆಸ್ಟ್ ಇವೆಂಟ್ ಆಗಸ್ಟ್ 17 ರಂದು ಆರಂಭವಾಗಲಿದೆ. ನವೆಂಬರ್‌ನಲ್ಲಿ ನಡೆಯಲಿರುವ ಕ್ವಾಲಿಫೈಯರ್ ಪಂದ್ಯಗಳಿಗೆ ಒಲಿಂಪಿಕ್ಸ್ ಟೆಸ್ಟ್ ಇವೆಂಟ್ಸ್ ಉಭಯ ತಂಡಗಳಿಗೆ ಉತ್ತಮ ವೇದಿಕೆಯಾಗುವ ನಿರೀಕ್ಷೆಯಿದೆ.

ಭಾರತೀಯ ಪುರುಷರ ತಂಡ ಆತಿಥೇಯ ಜಪಾನ್, ನ್ಯೂಝಿಲ್ಯಾಂಡ್ ಹಾಗೂ ಮಲೇಶ್ಯಾ ತಂಡಗಳನ್ನು ಎದುರಿಸಲಿದೆ. ಮಹಿಳಾ ತಂಡ ಆಸ್ಟ್ರೇಲಿಯ, ಚೀನಾ ಹಾಗೂ ಜಪಾನ್ ತಂಡದೊಂದಿಗೆ ಸೆಣಸಾಡಲಿದೆ.

 ‘‘ಈ ಟೂರ್ನಮೆಂಟ್ ಯುವ ಆಟಗಾರರಿಗೆ ಮಿಂಚಲು ಒಂದು ಉತ್ತಮ ಅವಕಾಶ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಲು ನಾವೆಲ್ಲರೂ ಧನಾತ್ಮಕವಾಗಿ ಕೆಲಸ ಮಾಡಲಿದ್ದೇವೆ. ಜಪಾನ್‌ನಲ್ಲಿ ಆಡುವುದರಿಂದ ನಮಗೆ ಆಡುವ ವಾತಾವರಣ ಹೇಗಿದೆ ಎಂದು ಅರ್ಥವಾಗಲಿದೆ. ನಾವು ಉತ್ತಮ ಟೂರ್ನಮೆಂಟ್‌ನ್ನು ಎದುರು ನೋಡುತ್ತಿದ್ದೇವೆ’’ ಎಂದು ನಾಯಕ ಹರ್ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.

‘‘ನಾವು ಕಳೆದ ಒಂದು ವರ್ಷದಿಂದ ಜಪಾನ್ ಹಾಗೂ ಚೀನಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದೇವೆ. ಇದೀಗ ಆಸ್ಟ್ರೇಲಿಯ ವಿರುದ್ಧ ಶ್ರೇಷ್ಠ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದೇವೆ. ಈ ತಂಡದ ವಿರುದ್ಧ ಗೆಲುವು ನಮ್ಮ ತಂಡದ ಒಲಿಂಪಿಕ್ಸ್ ಕ್ವಾಲಿಫೈಯರ್ ತಯಾರಿಯ ಮೇಲೆ ದೊಡ್ಡ ಪರಿಣಾಮಬೀರಲಿದೆ’’ ಎಂದು ಮಹಿಳಾ ತಂಡ ಜಪಾನ್‌ಗೆ ನಿರ್ಗಮಿಸುವ ಮೊದಲು ಮಹಿಳಾ ತಂಡದ ನಾಯಕಿ ರಾಣಿ ಹೇಳಿದ್ದಾರೆ.

ಪುರುಷರ ಹಾಗೂ ಮಹಿಳೆಯರ ತಂಡ ಆಗಸ್ಟ್ 17 ರಂದು ಕ್ರಮವಾಗಿ ಮಲೇಶ್ಯ ಹಾಗೂ ಆತಿಥೇಯ ಜಪಾನ್ ತಂಡವನ್ನು ಎದುರಿಸುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News