ವಿಶ್ವ ಚಾಂಪಿಯನ್‌ಶಿಪ್ ಪದಕದತ್ತ ಚಿರಾಗ್- ಸಾತ್ವಿಕ್ ಚಿತ್ತ

Update: 2019-08-11 18:22 GMT

ಹೊಸದಿಲ್ಲಿ, ಆ.11: ಥಾಯ್ಲೆಂಡ್ ಓಪನ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ಭಾರತದ ನೂತನ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ರಾನಿಕ್‌ರೆಡ್ಡಿ ಮುಂದಿನ ವಾರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸುವತ್ತ ಚಿತ್ತಹರಿಸಿದ್ದಾರೆ.

ಭಾರತದ ಜೋಡಿ ಕಳೆದ ರವಿವಾರ ಬಿಡಬ್ಲುಎಫ್ ಸೂಪರ್-500 ಪ್ರಶಸ್ತಿ ಜಯಿಸಿದ ಮೊದಲ ಪುರುಷರ ಡಬಲ್ಸ್ ಜೋಡಿ ಎಂಬ ಹಿರಿಮೆ ಪಾತ್ರವಾಗಿತ್ತು. ಈ ಪ್ರಶಸ್ತಿ ನೆರವಿನಿಂದ ರ್ಯಾಂಕಿಂಗ್‌ನಲ್ಲಿ ಅಗ್ರ-10 ಸ್ಥಾನ ಪಡೆದಿದ್ದಾರೆ.

ಭಾರತದ ಜೋಡಿ ಥಾಯ್ಲೆಂಡ್ ಓಪನ್‌ನಲ್ಲಿ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಫಝರ್ ಅಲ್‌ಫಿಯಾನ್ ಹಾಗೂ ಮುಹಮ್ಮದ್ ರಿಯಾನ್‌ರನ್ನು ಸೋಲಿಸಿತ್ತು. ಸೆಮಿ ಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ ಕೊ ಸಂಗ್ ಹಿಯುನ್ ಹಾಗೂ ಶಿನ್ ಬೆಕ್ ಚೆಯೊಲ್‌ರನ್ನು ಸೋಲಿಸಿತ್ತು. ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ ಲಿನ್ ಜುನ್ ಹುಯ್ ಹಾಗೂ ಲಿಯು ಯು ಚೆನ್‌ರನ್ನು ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು.

ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಾವು ತೋರಿರುವ ಪ್ರದರ್ಶನ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸುವ ವಿಶ್ವಾಸ ಮೂಡಿಸಿದೆ ಎಂದು ಚಿರಾಗ್ ಶೆಟ್ಟಿ ಹೇಳಿದರು.

‘‘ಮುಂದಿನ ವಾರ ವಿಶ್ವ ಚಾಂಪಿಯನ್‌ಶಿಪ್ ಆರಂಭವಾಗಲಿದೆ. ಟೂರ್ನಿಗೆ ಮೊದಲು ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಹೆಚ್ಚಿನ ಎಲ್ಲ ಅಗ್ರ ಆಟಗಾರರು ಥಾಯ್ಲೆಂಡ್ ಓಪನ್‌ನಲ್ಲಿ ಪಾಲ್ಗೊಂಡಿದ್ದರು. ಅವರನ್ನು ಮಣಿಸಿರುವುದು ನಮಗೆ ಆತ್ಮವಿಶ್ವಾಸವನ್ನು ಮೂಡಿಸಿದೆ. ನಾವು ಟೂರ್ನಿಯಲ್ಲಿ ಫೇವರಿಟ್ ಅಲ್ಲ ಎಂದು ಗೊತ್ತಿದೆ. ಆದರೆ, ಪದಕ ಗೆಲ್ಲುವ ವಿಶ್ವಾಸವನ್ನು ಮೂಡಿಸಿದ್ದೇವೆ’’ ಎಂದು ಚಿರಾಗ್ ಹೇಳಿದರು.

 ವಿಶ್ವ ಚಾಂಪಿಯನ್ ಆಗುವ ಸಾಮರ್ಥ್ಯ ನಮಗಿದೆ. ಥಾಯ್ಲೆಂಡ್ ಓಪನ್ ಉನ್ನತಮಟ್ಟದ ಟೂರ್ನಿ. ಇದು ನಮಗೆ ವಿಶ್ವ ಚಾಂಪಿಯನ್‌ಶಿಪ್‌ನ್ನು ಸುಲಭವಾಗಿಸಬಹುದು. ನಮಗೆ ಪದಕ ಜಯಿಸುವ ಉತ್ತಮ ಅವಕಾಶವಿದೆ ಎಂದು ಚಿರಾಗ್ ಅಭಿಪ್ರಾಯಪಟ್ಟರು.

 ಥಾಯ್ಲೆಂಡ್ ಓಪನ್ ಕಿರೀಟ ಧರಿಸಿ ಐತಿಹಾಸಿಕ ಸಾಧನೆ ಮಾಡಿರುವ ಚಿರಾಗ್ ಹಾಗೂ ಸಾತ್ವಿಕ್ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್‌ನಲ್ಲಿ ಏಳು ಸ್ಥಾನ ಭಡ್ತಿ ಪಡೆದು ಅಗ್ರ-9ರಲ್ಲಿ ಸ್ಥಾನ ಪಡೆದಿದ್ದಾರೆ.

 ಟೋಕಿಯೊ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಆಡುವ ಅವಕಾಶ ಜೀವಂತವಾಗಿಸಲು ಈ ವರ್ಷಾಂತ್ಯದ ತನಕ ಅಗ್ರ-10 ರ್ಯಾಂಕಿಂಗ್ ಕಾಯ್ದುಕೊಳ್ಳಲು ಬಯಸಿದ್ದೇವೆ. ಅಗ್ರ-10ರಲ್ಲಿ ರ್ಯಾಂಕಿಂಗ್‌ನ್ನು ಕಾಯ್ದುಕೊಳ್ಳುವುದು ಮುಂದಿನ ಆರು ತಿಂಗಳ ಕಾಲ ನಮ್ಮ ಮುಂದಿರುವ ಗುರಿ. ಆದರೆ ಇದು ಕಷ್ಟಕರ. ಕಳೆದ ವರ್ಷದ ಸೆಪ್ಟಂಬರ್‌ನಿಂದ ಡಿಸೆಂಬರ್ ತನಕ ಆಡಿರುವ ಟೂರ್ನಿಗಳಲ್ಲಿ ಗಳಿಸಿರುವ ಅಂಕವೇ ನಮ್ಮ ಬಳಿಯಿರುವ ರೇಟಿಂಗ್ ಪಾಯಿಂಟ್ ಆಗಿದೆ. ಕ್ವಾರ್ಟರ್ ಹಾಗೂ ಸೆಮಿ ಫೈನಲ್‌ನಲ್ಲಿ ಆಡುವುದು ನಮ್ಮ ಮುಖ್ಯ ಗುರಿ. ಮತ್ತೊಂದು ಪ್ರಶಸ್ತಿ ಜಯಿಸಿದರೆ ಮುಂದಿನ ವರ್ಷ ಅಗ್ರ-5ರಲ್ಲಿ ಸ್ಥಾನ ಪಡೆಯುವ ಅವಕಾಶ ಸಿಗುತ್ತದೆ ಎಂದು ಚಿರಾಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News