ಎರಡನೇ ಏಕದಿನ: ಭಾರತಕ್ಕೆ 59 ರನ್ ಜಯ

Update: 2019-08-12 04:32 GMT

ಪೋರ್ಟ್ ಆಫ್ ಸ್ಪೇನ್, ಆ.12: ನಾಯಕ ವಿರಾಟ್ ಕೊಹ್ಲಿ ಸಿಡಿಸಿದ 42ನೇ ಶತಕದ ಸಹಾಯದಿಂದ ಭಾರತ ತಂಡ ವೆಸ್ಟ್‌ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯವನ್ನು ಡಕ್‌ವರ್ತ್ -ಲೂಯಿಸ್ ನಿಯಮದಡಿ 59 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಈ ಗೆಲುವಿನ ಮೂಲಕ ಭಾರತ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕ ಕೊಹ್ಲಿ 125 ಎಸೆತಗಳಲ್ಲಿ 120 ರನ್ ಹಾಗೂ ಶ್ರೇಯಸ್ ಅಯ್ಯರ್ ಅರ್ಧಶತಕ(71)ನೆರವಿನಿಂದ 7 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿತು.

ಪಂದ್ಯದಲ್ಲಿ ಎರಡನೇ ಬಾರಿ ಮಳೆ ಅಡ್ಡಿಪಡಿಸಿದ ಕಾರಣ ವಿಂಡೀಸ್ ಗೆಲುವಿಗೆ 46 ಓವರ್‌ಗಳಲ್ಲಿ 270 ರನ್ ಪರಿಷ್ಕೃತ ಗುರಿ ಪಡೆಯಿತು. ಆತಿಥೇಯ ತಂಡ ಒಂದು ಹಂತದಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 148 ರನ್ ಗಳಿಸಿತು. ಆದರೆ, ದಿಢೀರ್ ಕುಸಿತು ಕಂಡು 62 ರನ್‌ಗೆ ಕೊನೆಯ 6 ವಿಕೆಟ್‌ಗಳನ್ನು ಕಳೆದುಕೊಂಡು 42 ಓವರ್‌ಗಳಲ್ಲಿ ಕೇವಲ 210 ರನ್‌ಗೆ ಆಲೌಟಾಯಿತು.

 ಭಾರತದ ಪರ ಭುವನೇಶ್ವರ ಕುಮಾರ್(4-31)ಯಶಸ್ವಿ ಬೌಲ್ ಎನಿಸಿಕೊಂಡರು. ಮುಹಮ್ಮದ್ ಶಮಿ(2-39) ಹಾಗೂ ಕುಲದೀಪ್ ಯಾದವ್(2-59)ತಲಾ ಎರಡು ವಿಕೆಟ್‌ಗಳನ್ನು ಉರುಳಿಸಿದರು.

ಲಾರಾ ದಾಖಲೆ ಮುರಿದ ಗೇಲ್

  ವಿಂಡೀಸ್‌ನ ಪರ ಗರಿಷ್ಠ 300ನೇ ಏಕದಿನ ಪಂದ್ಯವನ್ನಾಡಿದ ಆರಂಭಿಕ ಆಟಗಾರ ಕ್ರಿಸ್ ಗೇಲ್ ಮಹತ್ವದ ಮೈಲುಗಲ್ಲು ತಲುಪಿದರು. ವಿಂಡೀಸ್ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿರುವ ಲೆಜೆಂಡ್ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಹಿಂದಿಕ್ಕಿದರು. ಖಲೀಲ್ ಅಹ್ಮದ್ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸಿದ ಗೇಲ್ ಒಟ್ಟು 10,353 ರನ್ ಗಳಿಸಿದರು. ಒಟ್ಟು 10,348 ರನ್ ಗಳಿಸಿದ್ದ ಲಾರಾ ಅವರ ಗರಿಷ್ಠ ಸ್ಕೋರ್ ದಾಖಲೆಯನ್ನು ಮುರಿದರು.

 ಎವಿನ್ ಲೂಯಿಸ್(65) ಮೊದಲ ವಿಕೆಟ್ ಜೊತೆಯಾಟದಲ್ಲಿ 45 ರನ್ ಸೇರಿಸಿ ಉತ್ತಮ ಆರಂಭವನ್ನು ನೀಡಿದ ಗೇಲ್ 24 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿ ಭುವನೇಶ್ವರ್‌ಗೆ ವಿಕೆಟ್ ಒಪ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News