ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ ಶಾರುಖ್ ಖಾನ್, ಸಲ್ಮಾನ್ ಖಾನ್ !

Update: 2019-08-12 13:53 GMT
ಶಾರೂಖ್ ಖಾನ್ ಹಾಗೂ ಸಲ್ಮಾನ್ ಖಾನ್

ಹೊಸದಿಲ್ಲಿ, ಆ.12: ಎಲ್ಲರಿಗೂ ಗೊತ್ತಿರುವಂತೆ  ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಬಾಲಿವುಡ್‌ನ ಜನಪ್ರಿಯ ನಟರಾಗಿದ್ದಾರೆ. ವಿಶೇಷವೆಂದರೆ ಶಾರೂಖ್ ಖಾನ್ ಹಾಗೂ ಸಲ್ಮಾನ್ ಖಾನ್ ಹೆಸರಿನ ಯುವ ಭಾರತೀಯ ಕ್ರಿಕೆಟಿಗರು ಎರಡು ವಿಭಿನ್ನ ರಾಜ್ಯಗಳ ಪರ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ.

ರಾಜಸ್ಥಾನದ ಝಲ್ವಾರ್‌ನಲ್ಲಿ ಜನಿಸಿರುವ 20ರ ಹರೆಯದ ಕ್ರಿಕೆಟಿಗ ಸಲ್ಮಾನ್ ಖಾನ್ ಹಾಗೂ ಚೆನ್ನೈನಲ್ಲಿ ಜನಿಸಿರುವ 24ರ ಹರೆಯದ   ಶಾರುಖ್ ಖಾನ್ ಸದ್ಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಪ್ರತಿಭೆಗಳು. ಶಾರೂಖ್ ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸಲ್ಮಾನ್ ರಾಜಸ್ಥಾನ ತಂಡದ ಪರ ಆಡುತ್ತಿದ್ದಾರೆ.

‘‘ನನ್ನ ಚಿಕ್ಕಮ್ಮ  ಶಾರುಖ್ ಖಾನ್‌ರ ದೊಡ್ಡ ಅಭಿಮಾನಿ. ಗಂಡುಮಗು ಜನಿಸಿದರೆ  ಶಾರುಖ್ ಎಂದು ಹೆಸರಿಡಬೇಕೆಂದು ನನ್ನ ಅಮ್ಮನಿಗೆ ಅವರು ಹೇಳಿದ್ದರು. ಹಾಗಾಗಿ ನನಗೆ ಶಾರೂಖ್ ಖಾನ್ ಎಂದು ಹೆಸರಿಟ್ಟಿದ್ದರು’’ ಎಂದು  ಶಾರುಖ್ ಹೇಳಿದ್ದಾರೆ.

 2016(ಶ್ರೀಲಂಕಾ) ಹಾಗೂ 2017ರಲ್ಲಿ(ಮಲೇಶ್ಯ) ಎರಡು ಬಾರಿ ಭಾರತದ ಅಂಡರ್-19 ತಂಡ ಏಶ್ಯ ಕಪ್ ಪ್ರಶಸ್ತಿ ಜಯಿಸಿದಾಗ ತಂಡದ ಭಾಗವಾಗಿದ್ದ ಸಲ್ಮಾನ್ ಖಾನ್ ಹೆಸರಿನ ಹಿಂದೆಯೂ ಒಂದು ಕತೆಯಿದೆ.

‘‘ನನ್ನ ತಂದೆಗೆ ಸಲ್ಮಾನ್ ಶಬ್ದದ ಅರ್ಥ ತುಂಬಾ ಇಷ್ಟ. ಹೀಗಾಗಿ ಆ ಹೆಸರನ್ನು ಅವರೇ ಇಟ್ಟಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್‌ರಿಂದಾಗಿ ನನಗೆ ಈ ಹೆಸರು ಇಟ್ಟಿಲ್ಲ’’ ಎಂದು ಸಲ್ಮಾನ್ ಹೇಳಿದ್ದಾರೆ.

ಬಲಗೈ ಸ್ಪಿನ್ ಬೌಲರ್‌ಗಳಾಗಿರುವ  ಶಾರುಖ್ ಹಾಗೂ ಸಲ್ಮಾನ್ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.

2014ರಲ್ಲಿ ತಮಿಳುನಾಡು ತಂಡಕ್ಕೆ ಆಯ್ಕೆಯಾಗಿದ್ದ  ಶಾರುಖ್ ನಾಲ್ಕು ವರ್ಷಗಳ ಬಳಿಕ 2018ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. 24ರ ಹರೆಯದ  ಶಾರುಖ್ ಕೊನೆಗೂ ಚೆನ್ನೈನಲ್ಲಿ ನಡೆದ ಕೇರಳ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ತನಗೆ ಲಭಿಸಿದ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದ ಅವರು ಮೊದಲ ಇನಿಂಗ್ಸ್‌ನಲ್ಲಿ ಔಟಾಗದೆ 92 ಹಾಗೂ 2ನೇ ಇನಿಂಗ್ಸ್‌ನಲ್ಲಿ 34 ರನ್ ಗಳಿಸಿದ್ದರು. ಈ ಮೂಲಕ ತಮಿಳುನಾಡು ತಂಡ ಕೇರಳ ವಿರುದ್ಧ 151 ರನ್‌ಗಳಿಂದ ಜಯ ಸಾಧಿಸಲು ನೆರವಾಗಿದ್ದರು.

20ರ ಹರೆಯದ ಸಲ್ಮಾನ್ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಡಲು ಹೆಚ್ಚು ಸಮಯ ಕಾಯಲಿಲ್ಲ. 2016ರಲ್ಲಿ ಒಡಿಶಾ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಸಲ್ಮಾನ್ 103 ಎಸೆತಗಳಲ್ಲಿ 110 ರನ್ ಗಳಿಸಿದ್ದರು.ಚೊಚ್ಚಲ ಶತಕ ಸಿಡಿಸಿದ್ದಾಗ ಅವರ ವಯಸ್ಸು 17. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News