ಬರ್ಮಿಂಗ್‌ಹ್ಯಾಮ್‌ ಗೇಮ್ಸ್ನಿಂದ ಶೂಟಿಂಗ್ ಕ್ರೀಡೆ ಹೊರಕ್ಕೆ

Update: 2019-08-13 17:41 GMT

ಲಂಡನ್, ಆ.13:ಭಾರತ ಇಡೀ ಕ್ರೀಡಾಕೂಟವನ್ನು ಬಹಿಷ್ಕರಿಸುವ ಬೆದರಿಕೆ ಹಾಕಿರುವ ಹೊರತಾಗಿಯೂ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ 2022ರ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶೂಟಿಂಗ್ ಕ್ರೀಡೆಯನ್ನು ಉಳಿಸಿಕೊಳ್ಳುವುದಿಲ್ಲ ಎಂದು ಕಾಮನ್‌ವೆಲ್ತ್ ಗೇಮ್ಸ್ ಒಕ್ಕೂಟದ ಅಧ್ಯಕ್ಷ ಲೂಯಿಸ್ ಮಾರ್ಟಿನ್ ಸ್ಪಷ್ಟಪಡಿಸಿದ್ದಾರೆ.

1974ರ ಬಳಿಕ ಮೊದಲ ಬಾರಿ ಶೂಟಿಂಗ್‌ನ್ನು ಕಾಮನ್‌ವೆಲ್ತ್ ಗೇಮ್ಸ್ ಕಾರ್ಯಕ್ರಮದಿಂದ ಹೊರಗಿಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬ್ರಿಟನ್‌ನ ದಿನಪತ್ರಿಕೆಗೆ ಮಾರ್ಟಿನ್ ಹೇಳಿದ್ದಾರೆ. ಶೂಟಿಂಗ್ ಕ್ರೀಡೆಯಲ್ಲಿ ಭಾರತ ಭಾರೀ ಯಶಸ್ಸು ಗಳಿಸಿದೆ. ಕಳೆದ ವರ್ಷ ಆಸ್ಟ್ರೇಲಿಯದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಗಳಿಸಿರುವ 66 ಪದಕಗಳ ಪೈಕಿ 16 ಪದಕಗಳು ಶೂಟರ್‌ಗಳೇ ಗೆದ್ದುಕೊಟ್ಟಿದ್ದರು.

ಶೂಟಿಂಗ್‌ನ್ನು ಗೇಮ್ಸ್‌ನಿಂದ ಹೊರಗಿಟ್ಟಿದ್ದನ್ನು ಪ್ರತಿಭಟಿಸಿ ಬರ್ಮಿಂಗ್‌ಹ್ಯಾಮ್ ಗೇಮ್ಸ್ ನಿಂದ ಬಹಿಷ್ಕರಿಸುವ ಸಲಹೆಯನ್ನು ಭಾರತದ ಒಲಿಂಪಿಕ್ಸ್ ಸಂಸ್ಥೆ(ಐಒಎ)ಅಧ್ಯಕ್ಷ ನರೇಂದ್ರ ಬಾತ್ರಾ ನೀಡಿದ್ದರು. ಈ ಕ್ರಮಕ್ಕೆ ಅನುಮತಿ ನೀಡುವಂತೆ ಕಳೆದ ತಿಂಗಳು ಕ್ರೀಡಾ ಮಂತ್ರಿ ಕಿರಣ್ ರೆಜಿಜುಗೆ ವಿನಂತಿಸಿದ್ದರು.

‘‘ಶೂಟಿಂಗ್ ಒಂದು ಕಡ್ಡಾಯ ಕ್ರೀಡೆಯಲ್ಲ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಿದ್ದೇವೆ. ಆದರೆ, ಗೇಮ್ಸ್‌ನಲ್ಲಿ ಶೂಟಿಂಗ್ ಇರುವುದಿಲ್ಲ. ನಮ್ಮಲ್ಲಿ ಅದಕ್ಕೆ ಎಲ್ಲಿಯೂ ಕೂಡ ಜಾಗವಿಲ್ಲ’’ಎಂದು ಸುದ್ದಿಗಾರರಿಗೆ ಮಾರ್ಟಿನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News