ಬರ್ಮಿಂಗ್‌ಹ್ಯಾಮ್‌ ಗೇಮ್ಸ್ನಿಂದ ಶೂಟಿಂಗ್ ಕ್ರೀಡೆ ಹೊರಕ್ಕೆ

Update: 2019-08-13 17:42 GMT

ಮೆಲ್ಬೋರ್ನ್, ಆ.13: ಬರ್ಮಿಂಗ್‌ಹ್ಯಾಮ್‌ನಲ್ಲಿ 2022ರಲ್ಲಿ ನಡೆಯುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಮಹಿಳಾ ಟ್ವೆಂಟಿ-20 ಪಂದ್ಯವನ್ನು ಸೇರ್ಪಡೆಗೊಳಿಸಲಾಗಿದೆ. ಈ ಮೂಲಕ 1998ರ ಬಳಿಕ ಮೊದಲ ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್ ಮರಳಿದಂತಾಗಿದೆ. ಈ ಬೆಳವಣಿಗೆಯನ್ನು ಕಾಮನ್‌ವೆಲ್ತ್ ಗೇಮ್ಸ್ ಒಕ್ಕೂಟ ಹಾಗೂ ಐಸಿಸಿ ಮಂಗಳವಾರ ಖಚಿತಪಡಿಸಿವೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಈ ಮೊದಲು ಕೇವಲ ಒಂದು ಬಾರಿ ಕ್ರಿಕೆಟ್ ಕಾಣಿಸಿಕೊಂಡಿದೆ. 1998ರಲ್ಲಿ ಕೌಲಾಲಂಪುರದಲ್ಲಿ ನಡೆದ ಗೇಮ್ಸ್‌ನಲ್ಲಿ ಪುರುಷರ ಕ್ರಿಕೆಟ್ ತಂಡ ಭಾಗವಹಿಸಿತ್ತು. ಆಗ ದಕ್ಷಿಣ ಆಫ್ರಿಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.

2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಜು.17ರಿಂದ ಆಗಸ್ಟ್ 7ರ ತನಕ ನಿಗದಿಯಾಗಿದೆ. ಕ್ರಿಕೆಟ್ ಪಂದ್ಯಾಟದಲ್ಲಿ 8 ಅಂತರ್‌ರಾಷ್ಟ್ರೀಯ ತಂಡಗಳು ಭಾಗವಹಿಸಲಿವೆ. ‘‘ಇಂದು ಐತಿಹಾಸಿಕ ದಿನ. ಕಾಮನ್‌ವೆಲ್ತ್ ಗೇಮ್ಸ್‌ಗೆ ಕ್ರಿಕೆಟ್‌ಕ್ರೀಡೆಯನ್ನು ಮರಳಿ ಸ್ವಾಗತಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ’’ ಎಂದು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ ಅಧ್ಯಕ್ಷ ಲೂಯಿಸ್ ಮಾರ್ಟಿನ್ ಹೇಳಿದ್ದಾರೆ.

‘‘ಇದು ಮಹಿಳಾ ಕ್ರಿಕೆಟ್ ಹಾಗೂ ಜಾಗತಿಕ ಕ್ರಿಕೆಟ್ ಸಮುದಾಯಕ್ಕೆೆ ನಿಜವಾಗಿಯೂ ಐತಿಹಾಸಿಕ ಕ್ಷಣವಾಗಿದೆ. ಈ ಬಿಡ್‌ಗೆ ಬೆಂಬಲ ನೀಡಲು ನಾವೆಲ್ಲರೂ ಒಂದಾಗಿದ್ದೆವು’’ ಎಂದು ಐಸಿಸಿ ಮುಖ್ಯ ಕಾರ್ಯಾಧ್ಯಕ್ಷ ಮನು ಸಾವ್‌ನಿ ಹೇಳಿದ್ದಾರೆ. ಎಲ್ಲ 8 ಪಂದ್ಯಗಳು ಎಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಇತ್ತೀಚೆಗೆ ಐಸಿಸಿ ಪುರುಷರ ವಿಶ್ವಕಪ್‌ನ ಹಲವು ಸ್ಮರಣೀಯ ಪಂದ್ಯಗಳು ಇದೇ ಮೈದಾನದಲ್ಲಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News