ರಾಹುಲ್ ದ್ರಾವಿಡ್‌ ಸ್ವಹಿತಾಸಕ್ತಿ ನಿಯಮ ಉಲ್ಲಂಘಿಸಿಲ್ಲ: ಸಿಒಎ

Update: 2019-08-13 17:44 GMT

ಮುಂಬೈ, ಆ.13: ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಮುಖ್ಯಸ್ಥರಾಗಿ ರಾಹುಲ್ ದ್ರಾವಿಡ್‌ರನ್ನು ಮಂಗಳವಾರ ನೇಮಕ ಮಾಡಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ)ಭಾರತದ ಮಾಜಿ ನಾಯಕನ ವಿರುದ್ಧ ಯಾವುದೇ ಸ್ವಹಿತಾಸಕ್ತಿ ಸಂಘರ್ಷದ ಪ್ರಕರಣವಿಲ್ಲ. ಅವರು ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದಿದೆ.

 ‘‘ರಾಹುಲ್ ವಿರುದ್ಧ ಪ್ರಕರಣದಲ್ಲಿ ಯಾವುದೇ ಸ್ವಹಿತಾಸಕ್ತಿಯಿಲ್ಲ. ಅವರು ನೋಟಿಸ್‌ನ್ನು ಪಡೆದಿದ್ದಾರೆ. ನಾವು ಅವರ ಆಯ್ಕೆಗೆ ಇದ್ದ ಅಡೆ-ತಡೆ ನಿವಾರಿಸಿದ್ದೇವೆ. ನಮಗೆ ಯಾವುದೇ ಸ್ವಹಿತಾಸಕ್ತಿ ವಿಚಾರ ಕಂಡುಬಂದಿಲ್ಲ. ಇದೀಗ ಚೆಂಡು ಬಿಸಿಸಿಐ ಒಂಬುಡ್ಸ್‌ಮನ್ ಹಾಗೂ ಎಥಿಕ್ಸ್ ಅಧಿಕಾರಿ ನಿವೃತ್ತ ನ್ಯಾಯಾಧೀಶ ಡಿಕೆ ಜೈನ್ ಅವರ ಅಂಗಳದಲ್ಲಿದೆ. ನಮಗೆ ಸ್ವಹಿತಾಸಕ್ತಿ ವಿಚಾರ ಏಕೆ ಕಂಡುಬರಲಿಲ್ಲ ಎಂಬ ಅಂಶವನ್ನು ಒಂಬುಡ್ಸ್‌ಮನ್‌ಗೆ ವಿವರಣೆ ನೀಡುತ್ತೇವೆ’’ ಎಂದು ಸಿಎಒನ ಹೊಸ ಸದಸ್ಯ ಲೆಫ್ಟಿನೆಂಟ್ ಜನರಲ್ ರವಿ ಥೋಗ್ಡೆ ಹೇಳಿದ್ದಾರೆ.

 ಭಾರತೀಯ ಕ್ರಿಕೆಟ್‌ನ ಓರ್ವ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿರುವ ದ್ರಾವಿಡ್ ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಮಾಲಕತ್ವ ಹೊಂದಿರುವ ಇಂಡಿಯಾ ಸಿಮೆಂಟ್ ್ಸ ನ ಉದ್ಯೋಗಿಯಾಗಿದ್ದಾರೆ. ಎನ್‌ಸಿಎಗೆ ಆಯ್ಕೆಯಾದ ಬಳಿಕ ದ್ರಾವಿಡ್ ಸ್ವಹಿತಾಸಕ್ತಿ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಒಳಗಾಗಿದ್ದರು.

ಮಂಗಳವಾರ ಸಿಒಎ ಸಭೆಗೆ ಮೊದಲು ದ್ರಾವಿಡ್ ಮುಂಬೈನಲ್ಲಿದ್ದರು. ತನ್ನ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಜಸ್ಟಿಸ್ ಜೈನ್‌ಗೆ ಉತ್ತರ ಕಳುಹಿಸಿದ್ದರು. ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆಯೇ ಎಂದು ಖಚಿತವಾಗಿಲ್ಲ. ಇಂಡಿಯಾ ಸಿಮೆಂಟ್ಸ್ ನ ಉಪಾಧ್ಯಕ್ಷ ಹುದ್ದೆಯನ್ನು ತ್ಯಜಿಸಬೇಕಾಗುತ್ತದೆ ಅಥವಾ ತನ್ನ ಅಧಿಕಾರವಧಿ ಕೊನೆಗೊಳ್ಳುವ ತನಕ ರಜೆಯಲ್ಲಿರಬೇಕೆಂದು ಎನ್‌ಸಿಎ ಮುಖ್ಯಸ್ಥರಾಗಿ ನೇಮಕ ಮಾಡುವಾಗ ದ್ರಾವಿಡ್‌ಗೆ ಸಿಒಎ ಸ್ಪಷ್ಟಪಡಿಸಿದೆ. ದ್ರಾವಿಡ್ ರಾಜೀನಾಮೆ ನೀಡಿಲ್ಲ. ಅದರ ಬದಲಿಗೆ ಇಂಡಿಯಾ ಸಿಮೆಂಟ್ಸ್ ನಿಂದ ವೇತನರಹಿತರಜೆ ಪಡೆಯಲು ಕೋರಿದ್ದಾರೆ. ಇದು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಆಜೀವ ಸದಸ್ಯ ಸಂಜೀವ್ ಗುಪ್ತಾಗೆ ದ್ರಾವಿಡ್ ವಿರುದ್ಧ ಸ್ವಹಿತಾಸಕ್ತಿ ಉಲ್ಲಂಘನೆ ದೂರು ಸಲ್ಲಿಸಲು ಪ್ರೇರಣೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News