ದಕ್ಷಿಣ ಆಫ್ರಿಕ ತಂಡ ಪ್ರಕಟ, ಹೊಸಬರಿಗೆ ಆದ್ಯತೆ

Update: 2019-08-13 17:53 GMT

ಕೇಪ್‌ಟೌನ್, ಆ.13: ಭಾರತ ವಿರುದ್ಧ ಅಕ್ಟೋಬರ್ ಆದಿಯಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕ ತಂಡ ಮೂವರು ಹೊಸ ಮುಖಗಳಿಗೆ ಮಣೆ ಹಾಕಿದೆ. ಹಿರಿಯ ಆಟಗಾರರಾದ ಡೇಲ್ ಸ್ಟೇಯ್ನಿ ಹಾಗೂ ಹಾಶಿಮ್ ಅಮ್ಲ ನಿವೃತ್ತಿಯಾಗಿರುವುದರಿಂದ ಈ ಇಬ್ಬರು ಸ್ಟಾರ್ ಆಟಗಾರರು ಅನುಪಸ್ಥಿತಿಯಲ್ಲಿ ಆಫ್ರಿಕ ತನ್ನ ಸರಣಿ ಆಡಲು ಸಜ್ಜಾಗಬೇಕಾಗಿದೆ.

ಎಫ್‌ಡು ಪ್ಲೆಸಿಸ್ ನಾಯಕತ್ವದ 15 ಸದಸ್ಯರ ಟೆಸ್ಟ್ ತಂಡದಲ್ಲಿ ವೇಗದ ಬೌಲರ್ ಅನ್ರಿಚ್ ನೊರ್ಜೆ, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರೂಡಿ ಸೆಕೆಂಡ್ ಹಾಗೂ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಎಸ್.ಮುತ್ತುಸ್ವಾಮಿ ತಂಡದಲ್ಲಿ ಮೊದಲ ಬಾರಿ ಸ್ಥಾನ ಪಡೆದಿದ್ದಾರೆ.

ಭಾರತ ವಿರುದ್ಧ ಟೆಸ್ಟ್ ಸರಣಿಗೆ ಮೊದಲು ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಸರಣಿ ನಡೆಯಲಿದೆ. ಟ್ವೆಂಟಿ-20 ಸರಣಿಯಲ್ಲಿ ಕ್ವಿಂಟನ್ ಡಿಕಾಕ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

 ಮುಂದಿನ ವರ್ಷ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್‌ಗೆ ಮೊದಲು ನಮ್ಮ ನಾಯಕತ್ವ ಹಾಗೂ ಬ್ಯಾಟಿಂಗ್ ಆಯ್ಕೆಗೆ ಈ ಸರಣಿ ಕೊನೆಯ ಅವಕಾಶವಾಗಿದೆ. ವಿಶ್ವಕಪ್‌ಗೆ ಇನ್ನು ಒಂದು ವರ್ಷ ಕೂಡ ಇಲ್ಲ. ಹೀಗಾಗಿ ಅನನುಭವಿ ನಾಯಕತ್ವಕ್ಕೆ ಆದ್ಯತೆ ನೀಡಿದ್ದೇವೆೞೞಎಂದು ಕ್ರಿಕೆಟ್ ದ.ಆಫ್ರಿಕದ ಹಂಗಾಮಿ ನಿರ್ದೇಶಕ ಕೊರಿ ವ್ಯಾನ್ ಝಿಲ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕ ಸೆ.15 ರಂದು ಧರ್ಮಶಾಲಾದಲ್ಲಿ ಮೊದಲ ಟ್ವೆಂಟಿ-20 ಪಂದ್ಯವನ್ನು ಆಡುವ ಮೂಲಕ ತನ್ನ ಭಾರತ ಪ್ರವಾಸವನ್ನು ಆರಂಭಿಸಲಿದೆ.

► ವಿಶಾಖಪಟ್ಟಣ (ಅಕ್ಟೋಬರ್ 2-6), ರಾಂಚಿ(ಅ.10-14) ಹಾಗೂ ಪುಣೆ (ಅ.19-23) ಯಲ್ಲಿ ಟೆಸ್ಟ್ ಪಂದ್ಯಗಳು ನಡೆಯುತ್ತವೆ. ಟೆಸ್ಟ್ ತಂಡ: ಎಫ್‌ಡು ಪ್ಲೆಸಿಸ್(ನಾಯಕ), ಟೆಂಬಾ ಬವುಮಾ(ಉ.ನಾಯಕ), ಥೆನಿಸ್ ಡಿ ಬ್ರೂನ್, ಕ್ವಿಂಟನ್ ಡಿ ಕಾಕ್, ಡೀನ್ ಎಲ್ಗರ್, ಹಂಝಾ, ಕೇಶವ್ ಮಹಾರಾಜ್, ಏಡೆನ್ ಮರ್ಕರಮ್, ಎಸ್.ಮುತ್ತುಸ್ವಾಮಿ, ಲುಂಗಿ ಗಿಡಿ, ಅನ್ರಿಚ್ ನೊರ್ಟ್ವೆ, ವೆರ್ನಾನ್ ಫಿಲ್ಯಾಂಡರ್, ಡೇನ್ ಪಿಯೆಟ್, ಕಾಗಿಸೊ ರಬಾಡ ಹಾಗೂ ರೂಡಿ ಸೆಕೆಂಡ್.

► ಟ್ವೆಂಟಿ-20 ತಂಡ:ಕ್ವಿಂಟನ್ ಡಿಕಾಕ್(ನಾಯಕ), ರಾಸ್ಸಿ ವ್ಯಾನ್‌ಡರ್ ಡುಸ್ಸೆನ್(ಉಪ ನಾಯಕ), ಟೆಂಬಾ ಬವುಮಾ, ಜೂನಿಯರ್ ಡಾಲಾ, ಜೊರ್ನ್ ಫೋರ್ಟುನ್, ಬೆರಾನ್ ಹೆಂಡ್ರಿಕ್ಸ್, ರೀಝಾ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಅನ್ರಿಚ್ ನೊರ್ಟ್ಜೆ

, ಆ್ಯಂಡಿಲ್ ಫೆಹ್ಲುಕ್ವಾಯೊ, ಡ್ವೆಯ್ನೆ ಪ್ರಿಟೋರಿಯಸ್, ಕಾಗಿಸೊ ರಬಾಡ, ತಬ್ರೈಝ್ ಶಂಸಿ, ಜಾನ್-ಜಾನ್ ಸ್ಮಟ್ಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News