ವೆಸ್ಟ್ ಇಂಡೀಸ್‌ನಿಂದ ವಾಪಸ್ ಬರುವಂತೆ ಭಾರತದ ಮ್ಯಾನೇಜರ್‌ಗೆ ನಿರ್ದೇಶನ

Update: 2019-08-14 17:34 GMT

ಹೊಸದಿಲ್ಲಿ, ಆ.14: ಕೆರಿಬಿಯನ್‌ನಲ್ಲಿರುವ ಭಾರತದ ಹೈಕಮಿಶನ್‌ನ ಹಿರಿಯ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿರುವ ಟೀಮ್ ಇಂಡಿಯಾದ ಮ್ಯಾನೇಜರ್ ಸುನೀಲ್ ಸುಬ್ರಹ್ಮಣ್ಯಮ್‌ರನ್ನು ಈಗ ನಡೆಯುತ್ತಿರುವ ವೆಸ್ಟ್‌ಇಂಡೀಸ್ ಪ್ರವಾಸವನ್ನು ಮೊಟಕುಗೊಳಿಸಿ ತಕ್ಷಣವೇ ಸ್ವದೇಶಕ್ಕೆ ವಾಪಸ್ ಬರುವಂತೆ ಬಿಸಿಸಿಐ ಬುಧವಾರ ಖಡಕ್ ನಿರ್ದೇಶನ ನೀಡಿದೆ. ಭಾರತೀಯ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿ ಈ ಘಟನೆ ನಡೆದಿದೆ.

ಸುನೀಲ್ ಸುಬ್ರಹ್ಮಣ್ಯಮ್ ಮುಂಬೈನಲ್ಲಿ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಮುಂದೆ ಹಾಜರಾಗಿ, ಹಿರಿಯ ಭಾರತದ ವಿದೇಶಿ ಸೇವಾ ಅಧಿಕಾರಿಗಳೊಂದಿಗೆ ಅತಿರೇಕ ವರ್ತನೆ ತೋರಿದ ಕುರಿತು ವಿವರಣೆ ನೀಡಲು ಸೂಚಿಸಲಾಗಿದೆ ಎಂದು ಬಿಸಿಸಿಐನ ಉನ್ನತಾಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

‘ಜಲ ಸಂರಕ್ಷಣೆ’ಗೆ ಉತ್ತೇಜಿಸಲು ಕ್ರಿಕೆಟ್ ಆಟಗಾರರಿಂದ ವೀಡಿಯೊ ಶೂಟ್ ಮಾಡುವಂತೆ ಸರಕಾರ ಕಳುಹಿಸಿದ್ದ ಕೋರಿಕೆಯನ್ನು ಸುನೀಲ್ ಸುಬ್ರಹ್ಮಣ್ಯಂ ಅವರ ಗಮನಕ್ಕೆ ತರಲು ಐಎಫ್‌ಎಸ್ ಅಧಿಕಾರಿಗಳು ಅವರನ್ನು ಸಂಪರ್ಕಿಸಿ ಇದಕ್ಕೆ ಸಹಕಾರ ನೀಡುವಂತೆ ಕೋರಿದ್ದರು. ಆದರೆ, ಸುನೀಲ್,ಐಎಫ್‌ಎಸ್ ಅಧಿಕಾರಿಗಳೊಂದಿಗೆ ಅತಿರೇಕದ ವರ್ತನೆ ತೋರಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 2018ರ ಡಿಸೆಂಬರ್‌ನಲ್ಲಿ ಭಾರತದ ಆಸ್ಟ್ರೇಲಿಯ ಪ್ರವಾಸದ ವೇಳೆ ಪರ್ತ್ ಟೆಸ್ಟ್ ಪಂದ್ಯದ ವೇಳೆ ಅನುಚಿತವಾಗಿ ವರ್ತಿಸಿದ್ದ ಸುನೀಲ್ ಶಿಕ್ಷೆಯಿಂದ ಪಾರಾಗಿದ್ದರು. ‘‘ಭಾರತೀಯ ಕ್ರಿಕೆಟ್ ತಂಡ ಜಲ ಸಂರಕ್ಷಣೆ ಯೋಜನೆಯ ದೀರ್ಘ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಸುನೀಲ್ ಅದರ ಉಸ್ತುವಾರಿ ನೋಡಿಕೊಳ್ಳಬೇಕು. ಅದು ಮುಗಿದ ತಕ್ಷಣವೇ ವಿಮಾನ ಏರಿ ಭಾರತಕ್ಕೆ ಬರಬೇಕೆಂದು ಇ-ಮೇಲ್‌ನಲ್ಲಿ ಸೂಚಿಸಲಾಗಿದೆ. ಅವರಿಗೆ ವಿಂಡೀಸ್‌ನಲ್ಲಿ ನಿಲ್ಲುವ ಯಾವುದೇ ಅವಕಾಶವಿಲ್ಲ’’ ಎಂದು ಹಿರಿಯ ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

 ಟೀಮ್ ಇಂಡಿಯಾದ ನೂತನ ಮ್ಯಾನೇಜರ್ ಹುದ್ದೆಯ ಅಂತಿಮಪಟ್ಟಿಯಲ್ಲಿ ಸುನೀಲ್ ಹೆಸರಿದೆ. ಈ ತಿಂಗಳಾಂತ್ಯದಲ್ಲಿ ಹೊಸ ಮ್ಯಾನೇಜರ್ ಆಯ್ಕೆ ನಡೆಯಲಿದ್ದು,ಸಂದರ್ಶನದಲ್ಲಿ ಸುನೀಲ್‌ಗೆ ಅವಕಾಶ ನೀಡಲಾಗುತ್ತದೆಯೋ, ಇಲ್ಲವೋ ಎಂದು ಕಾದುನೋಡಬೇಕಾಗಿದೆ.

ತಮಿಳುನಾಡಿನ ಮಾಜಿ ಎಡಗೈ ಸ್ಪಿನ್ನರ್ ಸುನೀಲ್ ಅವರು ಗಯಾನ ಹಾಗೂ ಟ್ರಿನಿಡಾಡ್ ಹಾಗೂ ಟೊಬಾಬೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳೊಂದಿಗೆ ಅನುಚಿತ ವರ್ತನೆ ತೋರಿದ್ದಕ್ಕೆ ಬೇಷರತ್ ಕ್ಷಮೆಯಾಚಿಸಿದ್ದಾರೆ. ಆದರೆ, ಈ ಘಟನೆಯು ಅವರ ಹುದ್ದೆಗೆ ಸಂಚಕಾರ ತರುವ ಸಾಧ್ಯತೆಯಿದೆ.

52ರ ಹರೆಯದ ಸುನೀಲ್ ಸುಬ್ರಹ್ಮಣ್ಯಮ್ 74 ಪ್ರಥಮದರ್ಜೆ ಪಂದ್ಯಗಳನ್ನು ಆಡಿದ್ದು, ಒಟ್ಟು 285 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ರವಿಚಂದ್ರನ್ ಅಶ್ವಿನ್‌ಗೆ ಕೋಚ್ ಆಗಿ ಮಾರ್ಗದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News