ವಿಕಲಚೇತನರ ಟಿ-20 ವಿಶ್ವಕಪ್: ಭಾರತ ಚಾಂಪಿಯನ್

Update: 2019-08-14 17:38 GMT

ಮುಂಬೈ, ಆ.14: ವಿಕಲಚೇತನರ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 36 ರನ್‌ಗಳ ಅಂತರದಲ್ಲಿ ಜಯ ಗಳಿಸಿದ ಭಾರತ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಆಶ್ರಯದಲ್ಲಿ ಬ್ಲಾಕ್‌ಫಿಂಚ್ ನ್ಯೂ ರೋಡ್ ಗ್ರೌಂಡ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟದಲ್ಲಿ 180 ರನ್ ಗಳಿಸಿತ್ತು.

181 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 144 ರನ್ ಗಳಿಸಲಷ್ಟೇ ಶಕ್ತವಾಗಿದೆ.

   ಭಾರತದ ಪರ ಆರಂಭಿಕ ಆಟಗಾರ ಕುನಾಲ್ ಫಾನಸೆ 35 ಎಸೆತಗಳಲ್ಲಿ 36 ರನ್(3ಬೌಂಡರಿ) ಮತ್ತು 3 ಓವರ್‌ಗಳಲ್ಲಿ 15 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಆಲ್‌ರೌಂಡ್ ಪ್ರದರ್ಶನ ನೀಡಿದರು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟಾಸ್ ಜಯಿಸಿದ ಭಾರತದ ನಾಯಕ ವಿಕ್ರಾಂತ್ ಕೆನಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಸ್ಫೋಟಕ ಬ್ಯಾಟ್ಸ್‌ಮನ್ ರವೀಂದ್ರ ಸಾಂಟೆ 53 ರನ್( 34ಎ, 2ಬೌ, 4ಸಿ) , ಕೆನಿ 29ರನ್(27ಎ) ಮತ್ತು ಸುಗುಣೇಶ್ ಮಹೀಂದ್ರನ್ 33 ರನ್(11ಎ, 1ಬೌ, 4ಸಿ) ಕೊಡುಗೆ ನೀಡುವ ಮೂಲಕ ಭಾರತ ತಂಡದ ಖಾತೆಗೆ ದೊಡ್ಡ ಕೊಡುಗೆ ನೀಡಿದರು. ಫಾನಸ್(15ಕ್ಕೆ 2),ಸನ್ನಿ ಗೋಯಟ್ (4-0-23-2) ಮತ್ತು ನರೇಂದ್ರ ಮಂಗೊರು 23ಕ್ಕೆ1)ಇಂಗ್ಲೆಂಡನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು. ಇಂಗ್ಲೆಂಡ್‌ನ ಬ್ರೌನ್ 44 , ಫ್ಲೆನ್ 28 ರನ್ ಗಳಿಸಿದರು.

ಟೂರ್ನಮೆಂಟ್‌ನಲ್ಲಿ 8 ತಂಡಗಳು ಹಣಾಹಣಿ ನಡೆಸಿದ್ದವು. ರೌಂಡ್ ರಾಬಿನ್ ಮಾದರಿಯಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಅಗ್ರಸ್ಥಾನದೊಂದಿಗೆ ಫೈನಲ್ ತಲುಪಿತ್ತು.

ಸಂಕ್ಷಿಪ್ತ  ಸ್ಕೋರ್ ವಿವರ

► ಭಾರತ 20 ಓವರ್‌ಗಳಲ್ಲಿ 180/7( ಫಾನಸೆ 36, ಕೆನಿ 29, ಸಾಂಟೆ 53, ಮಹೇಂದ್ರನ್ 33; ಎಲ್ ಒೞಬ್ರಿಯಾನ್ 35ಕ್ಕೆ 2).

► ಇಂಗ್ಲೆಂಡ್ 20 ಓವರ್‌ಗಳಲ್ಲಿ 144/8( ಬ್ರೌನ್ 44, ಫ್ಲೆನ್ 28; ಫಾನಸೆ 15ಕ್ಕೆ 2, ಗೋಯಟ್ 23ಕ್ಕೆ 2, ನರೇಂದ್ರ ಮಂಗೊರು 23ಕ್ಕೆ 1, ಅನೀಶ್ ರಂಜನ್ 29ಕ್ಕೆ 1).

► ಪಂದ್ಯಶ್ರೇಷ್ಠ : ಕುನಾಲ್ ಫಾನಸೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News