ಸಚಿನ್ ಚೊಚ್ಚಲ ಶತಕದ ಸಾಧನೆಗೆ 29 ವರ್ಷ

Update: 2019-08-14 17:49 GMT

ಮ್ಯಾಂಚೆಸ್ಟರ್, ಆ.14: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಚೊಚ್ಚಲ ಶತಕದ ಸಾಧನೆಗೆ 29 ವರ್ಷ ತುಂಬಿದೆ.

ಓಲ್ಡ್ ಟ್ರಾಫರ್ಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ 1990, ಆ,9 ರಿಂದ 14ರ ತನಕ ನಡೆದ ಎರಡನೇ ಕ್ರಿಕೆಟ್ ಟೆಸ್ಟ್ ನಲ್ಲಿ ಸಚಿನ್ ತೆಂಡುಲ್ಕರ್ ಎರಡನೇ ಇನಿಂಗ್ಸ್‌ನಲ್ಲಿ ಔಟಾಗದೆ 119 ರನ್ ಗಳಿಸಿದ್ದರು.

  9ನೇ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ ಸಚಿನ್‌ಗೆ ಆಗ 17ರ ಹರೆಯ. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ(68) ದಾಖಲಿಸಿದ್ದ ಸಚಿನ್ ಚೊಚ್ಚಲ ಶತಕದ ಸಾಧನೆಯೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಎರಡನೇ ಇನಿಂಗ್ಸ್‌ನಲ್ಲಿ ಸಚಿನ್ ತೆಂಡುಲ್ಕರ್ ಶತಕ ಮತ್ತು ಮನೋಜ್ ಪ್ರಭಾಕರ್ (ಔಟಾಗದೆ 67) ಮುರಿಯದ ಜೊತೆಯಾಟದಲ್ಲಿ 160 ರನ್ ದಾಖಲಿಸಿ ಪಂದ್ಯವನ್ನು ಡ್ರಾಗೊಳಿಸಲು ನೆರವಾಗಿದ್ದರು.

 ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ತಂಡದ ಪರ ಮೊದಲ ಇನಿಂಗ್ಸ್‌ನಲ್ಲಿ ನಾಯಕ ಗ್ರಹಾಂ ಗೂಚ್ (116), ಮೈಕ್ ಅಥರ್ಟನ್(131), ರಾಬಿನ್ ಸ್ಮಿತ್(ಔಟಾಗದೆ 121) ಶತಕಗಳ ನೆರವಿನಲ್ಲಿ 519 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ಮೊದಲ ಇನಿಂಗ್ಸ್ ನಲ್ಲಿ 432 ರನ್ ಗಳಿಸಿತ್ತು. ನಾಯಕ ಮುಹಮ್ಮದ್ ಅಝರುದ್ದೀನ್ (179), ಸಂಜಯ್ ಮಾಂಜ್ರೇಕರ್(93) ಶತಕ ದಾಖಲಿಸಿದ್ದರು. ಭಾರತ 87 ರನ್‌ಗಳ ಹಿನ್ನಡೆ ಅನುಭವಿಸಿತ್ತು.

ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಆ್ಯಲನ್ ಲ್ಯಾಂಬ್ ಶತಕ(109), ಅಥರ್ಟನ್(74) , ರಾಬಿನ್ ಸ್ಮಿತ್(ಔಟಾಗದೆ 61) ಅರ್ಧಶತಕಗಳ ಸಹಾಯದಿಂದ 81 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 320 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

    ಗೆಲುವಿಗೆ 408 ರನ್‌ಗಳ ಸವಾಲನ್ನು ಪಡೆದ ಭಾರತ ಒಂದು ಹಂತದಲ್ಲಿ 127ಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ರವಿ ಶಾಸ್ತ್ರಿ(12), ಎನ್.ಎಸ್.ಸಿಧು (0), ಮಾಂಜ್ರೇಕರ್ ಅರ್ಧಶತಕ(50), ವೆಂಗ್‌ಸರ್ಕಾರ್(32), ಮುಹಮ್ಮದ್ ಅಝರುದ್ದೀನ್(11) ಔಟಾಗಿದ್ದರು. ಕಪಿಲ್ ದೇವ್ 26 ರನ್ ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ಸಚಿನ್ ತೆಂಡುಲ್ಕರ್ ಮತ್ತು ಮನೋಜ್ ಪ್ರಭಾಕರ್ ಕ್ರೀಸ್‌ಗೆ ಅಂಟಿಕೊಂಡು ಬ್ಯಾಟ್ ಮಾಡಿ ಭಾರತವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದರು, ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ಸಚಿನ್ 225 ನಿಮಿಷಗಳ ಬ್ಯಾಟಿಂಗ್‌ನಲ್ಲಿ 189 ಎಸೆತಗಳನ್ನು ಎದುರಿಸಿದ್ದರು. 17 ಬೌಂಡರಿಗಳ ಸಹಾಯದಿಂದ 119 ರನ್ ಗಳಿಸಿದ್ದರು. ಸಚಿನ್ ಈ ಶತಕದೊಂದಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರು. ಸಚಿನ್ ಆ ಬಳಿಕ ಆನೇಕ ದಾಖಲೆಗಳನ್ನು ಬರೆದರು. 100 ಶತಕಗಳನ್ನು ( ಟೆಸ್ಟ್ 51, ಏಕದಿನ 49) ದಾಖಲಿಸಿ ವಿಶ್ವ ದಾಖಲೆ ಬರೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News