ಪಾಕ್‌ನ ಅಂಡರ್-19 ತಂಡದ ಪ್ರಧಾನ ಕೋಚ್ ಹುದ್ದೆಗೆ ಮುಷ್ತಾಕ್ ಅರ್ಜಿ

Update: 2019-08-14 17:55 GMT

ಕರಾಚಿ, ಆ.14: ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ತನ್ನ ದೇಶದ 19 ವರ್ಷದೊಳಗಿನವರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಂದೆ ಸಂದರ್ಶನಕ್ಕೆ ಹಾಜರಾಗಲಿದ್ದಾರೆ.

42ರ ವಯಸ್ಸಿನ ಮುಷ್ತಾಕ್ 49 ಟೆಸ್ಟ್ ಹಾಗೂ 169 ಏಕದಿನ ಪಂದ್ಯಗಳಲ್ಲಿ ಒಟ್ಟು 496 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ರಾಷ್ಟ್ರೀಯ ಜೂನಿಯರ್ ತಂಡಕ್ಕೆ ಮುಖ್ಯ ಕೋಚ್ ಹುದ್ದೆಗೆ ಪಿಸಿಬಿ ಜಾಹೀರಾತು ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ಆಹ್ವಾನಕ್ಕೆ ಮುಷ್ತಾಕ್ ಸ್ಪಂದಿಸಿ ಅರ್ಜಿ ಸಲ್ಲಿಸಿದ್ದರು. ‘‘ನಾನು ಕಿರಿಯರ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ ಹಾಗೂ ಮುಂದಿನ ವಾರ ಸಂದರ್ಶನಕ್ಕೆ ಹಾಜರಾಗುತ್ತೇನೆ. ಪಾಕಿಸ್ತಾನ ಕ್ರಿಕೆಟ್‌ಗೆ ಸಾಕಷ್ಟು ಕೊಡುಗೆ ನೀಡಬಲ್ಲೆನೆಂಬ ವಿಶ್ವಾಸ ನನಗಿದೆ’’ ಎಂದು ಮುಷ್ತಾಕ್ ಹೇಳಿದ್ದಾರೆ.

 ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ)ಯ ಲೆವೆಲ್-3 ಕೋಚ್ ಆಗಿರುವ ಮುಷ್ತಾಕ್ ಈಗಾಗಲೇ ನ್ಯೂಝಿಲ್ಯಾಂಡ್, ಆಸ್ಟ್ರೇಲಿಯ, ವೆಸ್ಟ್‌ಇಂಡೀಸ್ ಹಾಗೂ ಬಾಂಗ್ಲಾದೇಶದ ಸೀನಿಯರ್ ತಂಡಗಳೊಂದಿಗೆ ಸ್ಪಿನ್ ಸಲಹೆಗಾರ ಅಥವಾ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

 ಇತ್ತೀಚೆಗೆ ನಡೆದ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಅವರು ಈಗ ನಡೆಯುತ್ತಿರುವ ಆ್ಯಶಸ್ ಸರಣಿಯಲ್ಲಿ ಆ ತಂಡಕ್ಕೆ ಸಲಹೆ ಸೂಚನೆ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News