ಸಚಿನ್‌ರ ಸಿಕ್ಸರ್ ದಾಖಲೆ ಸರಿಗಟ್ಟಿದ್ದಾರೆ ನ್ಯೂಝಿಲ್ಯಾಂಡ್‌ನ ಈ ಬೌಲರ್!

Update: 2019-08-16 10:02 GMT

ಹೊಸದಿಲ್ಲಿ, ಆ.16: ನ್ಯೂಝಿಲ್ಯಾಂಡ್‌ನ ವೇಗದ ಬೌಲರ್‌ವೋರ್ವ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ನಿರ್ಮಿಸಿರುವ ಸಿಕ್ಸರ್ ದಾಖಲೆಯೊಂದನ್ನು ಮುರಿದಿದ್ದಾರೆ. ಈ ಸುದ್ದಿ ಅಚ್ಚರಿಯಾದರೂ ಸತ್ಯ.

     ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ವೇಳೆ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ನ್ಯೂಝಿಲ್ಯಾಂಡ್ ವೇಗದ ಬೌಲರ್ ಟಿಮ್ ಸೌಥಿ 19 ಎಸೆತಗಳಲ್ಲಿ 14 ರನ್ ಗಳಿಸಿದರು. ಸೌಥಿ ಲಂಕಾದ ಸ್ಪಿನ್ನರ್ ಧನಂಜಯ ಸಿಲ್ವಾ ಅವರ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಸೌಥಿ ಸಿಡಿಸಿದ 69ನೇ ಸಿಕ್ಸರ್ ಆಗಿತ್ತು. ಈ ಸಾಧನೆಯ ಮೂಲಕ ಟೆಸ್ಟ್‌ನಲ್ಲಿ ಸಚಿನ್‌ರ ಸಿಕ್ಸರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದೀಗ ಸೌಥಿ ಹಾಗೂ ಸಚಿನ್‌ಕ್ರಮವಾಗಿ 89 ಹಾಗೂ 329 ಇನಿಂಗ್ಸ್‌ಗಳಲ್ಲಿ ತಲಾ 69 ಸಿಕ್ಸರ್‌ಗಳನ್ನು ಸಿಡಿಸಿ 17ನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆ ನ್ಯೂಝಿಲ್ಯಾಂಡ್‌ನ ಮಾಜಿ ನಾಯಕ ಹಾಗೂ ಕೆಕೆಆರ್‌ನ ನೂತನ ಕೋಚ್ ಬ್ರೆಂಡನ್ ಮೆಕಲಮ್ ಹೆಸರಲ್ಲಿದೆ. ಮೆಕಲಮ್ 176 ಟೆಸ್ಟ್ ಇನಿಂಗ್ಸ್‌ಗಳಲ್ಲಿ ಒಟ್ಟು 107 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಸಿಕ್ಸರ್‌ಗಳ ಶತಕ ಸಿಡಿಸಿದ ಇನ್ನೋರ್ವ ಆಟಗಾರರೆಂದರೆ: ಆಸ್ಟ್ರೇಲಿಯದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಆಡಮ್ ಗಿಲ್‌ಕ್ರಿಸ್ಟ್(137 ಇನಿಂಗ್ಸ್, 100 ಸಿಕ್ಸರ್) ಕ್ರಿಸ್ ಗೇಲ್(98), ಜಾಕ್ ಕಾಲಿಸ್(97) ಹಾಗೂ ವೀರೇಂದ್ರ ಸೆಹ್ವಾಗ್(91) ಆ ಬಳಿಕದ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News