ಟ್ರಿಗರ್ ಎಳೆಯುತ್ತಿರುವುದು ಅವರು, ಬಂದೂಕಲ್ಲ!
ಮೊರಿಸ್‌ಟೌನ್ (ಅಮೆರಿಕ), ಆ. 16: “ಬಂದೂಕುಗಳನ್ನು ಖರೀದಿಸುವವರ ಅರ್ಥಪೂರ್ಣ ಹಿನ್ನೆಲೆ ಪರಿಶೀಲನೆಯನ್ನು ನಾನು ಬೆಂಬಲಿಸುತ್ತೇನೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ದೇಶದಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಬಂದೂಕು ದಾಳಿಗಳನ್ನು ಮಾನಸಿಕ ಅಸ್ವಸ್ಥರು ಮಾಡಿದ್ದಾರೆ, ಹಾಗಾಗಿ ಅಮೆರಿಕವು ಇನ್ನೂ ಹೆಚ್ಚಿನ ಮಾನಸಿಕ ಆಸ್ಪತ್ರೆಗಳನ್ನು ಕಟ್ಟಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಬಂದೂಕು ಹಿಂಸೆಯ ಸಮಸ್ಯೆಯ ಕುರಿತು ಸೆನೆಟ್ ಮೆಜಾರಿಟಿ ನಾಯಕ ಮಿಚ್ ಮೆಕಾನೆಲ್ ಹಾಗೂ ಇತರ ಹಲವಾರು ರಿಪಬ್ಲಿಕನ್ನರೊಂದಿಗೆ ನಾನು ಮಾತುಕತೆ ನಡೆಸಿದ್ದೇನೆ ಎಂದು ಹೇಳಿದ ಟ್ರಂಪ್, ‘‘ಮತಿಹೀನ ಜನರು, ಅಪಾಯಕಾರಿ ಜನರು ಹಾಗೂ ನಿಜವಾಗಿಯೂ ಕೆಟ್ಟ ಜನರು ಬಂದೂಕುಗಳನ್ನು ಹೊಂದುವುದನ್ನು ಅವರು ಬಯಸುತ್ತಿಲ್ಲ’’ ಎಂದರು.
‘‘ಹುಚ್ಚರು ಬಂದೂಕುಗಳನ್ನು ಹೊಂದುವುದನ್ನು ನಾವು ಬಯಸುವುದಿಲ್ಲ’’ ಎಂದು ನ್ಯೂಜರ್ಸಿ ರಾಜ್ಯದ ಮೊರಿಸ್‌ಟೌನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.
ಈ ತಿಂಗಳು ಟೆಕ್ಸಾಸ್ ಮತ್ತು ಓಹಿಯೊ ರಾಜ್ಯಗಳಲ್ಲಿ ನಡೆದ ಎರಡು ಹತ್ಯಾಕಾಂಡಗಳ ಬಳಿಕ, ಬಂದೂಕು ಹಿಂಸಾಚಾರವನ್ನು ಹತ್ತಿಕ್ಕುವ ಒತ್ತಡಕ್ಕೆ ಟ್ರಂಪ್ ಒಳಗಾಗಿದ್ದಾರೆ. ಈ ಹತ್ಯಾಕಾಂಡಗಳಲ್ಲಿ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
‘‘ಅವರು ಬಂದೂಕಿನ ಟ್ರಿಗರನ್ನು ಎಳೆಯುತ್ತಿದ್ದಾರೆ. ಟ್ರಿಗರನ್ನು ಬಂದೂಕು ಎಳೆಯುತ್ತಿಲ್ಲ. ಹಾಗಾಗಿ, ಮಾನಸಿಕ ಕಾಯಿಲೆಯ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಾಗಿದೆ’’ ಎಂದು ಟ್ರಂಪ್ ಹೇಳಿದರು.