×
Ad

ಇರಾನ್ ತೈಲ ಟ್ಯಾಂಕರ್ ಬಿಡುಗಡೆ ಮಾಡಿದ ಜಿಬ್ರಾಲ್ಟರ್

Update: 2019-08-16 22:40 IST

ಟೆಹರಾನ್, ಆ. 16: ಜಿಬ್ರಾಲ್ಟರ್‌ನ ವಶದಲ್ಲಿರುವ ತನ್ನ ತೈಲ ಟ್ಯಾಂಕರನ್ನು ಬಿಡಿಸಿಕೊಳ್ಳಲು ತಾನು ಯಾವುದೇ ಬದ್ಧತೆಯನ್ನು ನೀಡಿಲ್ಲ ಎಂದು ಇರಾನ್ ಸರಕಾರದ ವಕ್ತಾರರೊಬ್ಬರು ಶುಕ್ರವಾರ ಹೇಳಿದ್ದಾರೆ.

ಹಡಗನ್ನು ವಶಕ್ಕೆ ಪಡೆದುಕೊಂಡವರು ಹೇಳುವಂತೆ, ‘ಗ್ರೇಸ್ 1’ ಹಡಗು ಸಿರಿಯಕ್ಕೆ ಹೋಗುತ್ತಿರಲಿಲ್ಲ ಎನ್ನುವುದನ್ನು ಅವರು ಪುನರುಚ್ಚರಿಸಿದ್ದಾರೆ.

ಐರೋಪ್ಯ ಒಕ್ಕೂಟದ ದಿಗ್ಬಂಧನಗಳನ್ನು ಉಲ್ಲಂಘಿಸಿ ಹಡಗು ಸಿರಿಯಕ್ಕೆ ತೈಲವನ್ನು ಒಯ್ಯುವುದಿಲ್ಲ ಎಂಬ ಲಿಖಿತ ಭರವಸೆಯನ್ನು ಇರಾನ್ ನೀಡಿದ ಬಳಿಕ ಹಡಗಿನ ವಿರುದ್ಧದ ಬಂಧನ ಆದೇಶವನ್ನು ತೆರವುಗೊಳಿಸಲಾಗಿದೆ ಎಂದು ಬ್ರಿಟಿಶ್ ಭೂಭಾಗ ಜಿಬ್ರಾಲ್ಟರ್‌ನ ಮುಖ್ಯಮಂತ್ರಿ ಫೇಬಿಯನ್ ಪಿಕಾರ್ಡೊ ಹೇಳಿದ್ದಾರೆ.

‘‘ ‘ಗ್ರೇಸ್ 1’ ಟ್ಯಾಂಕರ್‌ನ ಬಿಡುಗಡೆಗಾಗಿ ಇರಾನ್ ಯಾವುದೇ ಬದ್ಧತೆಯನ್ನು ವ್ಯಕ್ತಪಡಿಸಿಲ್ಲ. ಹಡಗಿನ ಗಮ್ಯ ಸ್ಥಳ ಸಿರಿಯ ಅಲ್ಲ. ನಾವು ಅದನ್ನು ಸ್ಪಷ್ಟಪಡಿಸಿದ್ದೇವೆ ಹಾಗೂ ಅದು ಸಿರಿಯ ಆಗಿದ್ದರೂ ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎನ್ನುವುದನ್ನೂ ಪುನರುಚ್ಚರಿಸಿದ್ದೇವೆ’’ ಎಂದು ಇರಾನ್ ವಿದೇಶ ಸಚಿವಾಲಯದ ವಕ್ತಾರ ಅಬ್ಬಾಸ್ ವೌಸವಿ ಹೇಳಿರುವುದಾಗಿ ತಸ್ನೀಮ್ ಸುದ್ದಿ ಸಂಸ್ಥೆ ಹೇಳಿದೆ.

ಪನಾಮ ಧ್ವಜವನ್ನು ಹೊಂದಿರುವ ಟ್ಯಾಂಕರನ್ನು ಬಿಡುಗಡೆ ಮಾಡಲು ಜಿಬ್ರಾಲ್ಟರ್ ಗುರುವಾರ ನಿರ್ಧರಿಸಿದೆ. ಆದರೆ ಯಾವಾಗ ಎನ್ನುವುದನ್ನು ಅದು ಹೇಳಿಲ್ಲ.

ಇಂಧನ ತುಂಬಿಸುವುದು ಸೇರಿದಂತೆ ಸಿದ್ಧತೆಗಳನ್ನು ಪೂರ್ಣಗೊಳಿಸಿದ ಬಳಿಕ 25 ನಾವಿಕರನ್ನು ಒಳಗೊಂಡಿರುವ ಹಡಗು ತನ್ನ ಪ್ರಯಾಣವನ್ನು ಮುಂದುವರಿಸಲಿದೆ ಎಂದು ಇರಾನ್‌ನ ಬಂದರು ಮತ್ತು ಸಮುದ್ರತೀರ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News