ರೊಹಿಂಗ್ಯಾ ನಿರಾಶ್ರಿತರನ್ನು ಮ್ಯಾನ್ಮಾರ್‌ಗೆ ವಾಪಸ್ ಕಳಿಸಲು 2ನೇ ಪ್ರಯತ್ನ: ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ
ಬ್ಯಾಂಕಾಕ್, ಆ. 16: ಮ್ಯಾನ್ಮಾರ್‌ನಲ್ಲಿ ಎರಡು ವರ್ಷಗಳ ಹಿಂದೆ ಸೇನೆಯ ದಮನ ಕಾರ್ಯಾಚರಣೆಗೆ ಹೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ಸುಮಾರು 7 ಲಕ್ಷ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರನ್ನು ಮ್ಯಾನ್ಮಾರ್‌ಗೆ ವಾಪಸ್ ಕಳುಹಿಸುವ ಎರಡನೇ ಪ್ರಯತ್ನವನ್ನು ಈ ಎರಡು ದೇಶಗಳು ಮಾಡುತ್ತಿವೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆ ಶುಕ್ರವಾರ ಹೇಳಿದೆ.
ಸ್ವಯಂಪ್ರೇರಿತವಾಗಿ ಹಿಂದಿರುಗಲು ಮುಂದೆ ಬಂದಿರುವ 3,450 ನಿರಾಶ್ರಿತರ ತಪಾಸಣೆಯಲ್ಲಿ ನೆರವು ನೀಡುವಂತೆ ಬಾಂಗ್ಲಾದೇಶ ಸರಕಾರ ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯನ್ನು ಕೋರಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನರ್‌ರ ವಕ್ತಾರೆ ಕ್ಯಾರಲೈನ್ ಗ್ಲಕ್ ‘ಅಸೋಸಿಯೇಟೆಡ್ ಪ್ರೆಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.
ಪರಿಶೀಲನೆಗಾಗಿ ಬಾಂಗ್ಲಾದೇಶವು ಮ್ಯಾನ್ಮಾರ್‌ಗೆ ಕಳುಹಿಸಿದ್ದ 22,000 ಹೆಸರುಗಳನ್ನು 3,450ಕ್ಕೆ ಇಳಿಸಲಾಗಿದೆ ಎಂದರು.
2017ರ ಆಗಸ್ಟ್‌ನಲ್ಲಿ ರೊಹಿಂಗ್ಯಾ ಬಂಡುಕೋರ ಗುಂಪೊಂದು ಪೊಲೀಸ್ ಠಾಣೆಗಳ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ, ಮ್ಯಾನ್ಮಾರ್ ಸೇನೆಯು ರೊಹಿಂಗ್ಯಾ ಅಲ್ಪಸಂಖ್ಯಾತರ ವಿರುದ್ಧ ಅಮಾನುಷ ದಮನ ಕಾರ್ಯಾಚರಣೆ ನಡೆಸಿತ್ತು. ದಮನ ಕಾರ್ಯಾಚರಣೆಯಲ್ಲಿ ನೂರಾರು ಮಂದಿ ಮೃತಪಟ್ಟರು ಹಾಗೂ ಜೀವ ಉಳಿಸಿಕೊಳ್ಳುವುದಕ್ಕಾಗಿ ಸುಮಾರು 7 ಲಕ್ಷ ಮಂದಿ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದರು.
ಮ್ಯಾನ್ಮಾರ್ ಸೈನಿಕರು ರೊಹಿಂಗ್ಯಾ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯಾಕಾಂಡ ನಡೆಸಿದ್ದಾರೆ ಹಾಗೂ ಸಾವಿರಾರು ಮನೆಗಳನ್ನು ಸುಟ್ಟುಹಾಕಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.
ಮ್ಯಾನ್ಮಾರ್‌ಗೆ ಹಿಂದಿರುಗುವುದು ಅಪಾಯಕಾರಿ ಎನ್ನುವ ನಿರಾಶ್ರಿತರು
ನಿರಾಶ್ರಿತರನ್ನು ವಾಪಸ್ ಕರೆಸಿಕೊಳ್ಳುವ ಯೋಜನೆ ಮತ್ತು ಸಿದ್ಧತೆಗಳ ಬಗ್ಗೆ ನಿರಾಶ್ರಿತರೊಂದಿಗೆ ಮಾತನಾಡಲು ಮ್ಯಾನ್ಮಾರ್‌ನ ಅಧಿಕಾರಿಗಳು ಜುಲೈ ತಿಂಗಳಲ್ಲಿ ಬಾಂಗ್ಲಾದೇಶದಲ್ಲಿರುವ ರೊಹಿಂಗ್ಯಾ ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿದ್ದಾರೆ. ಇದಕ್ಕೂ ಮುನ್ನ ಹಲವು ಬಾರಿ ಅವರು ಭೇಟಿ ನೀಡಿದ್ದಾರೆ.
ಆದರೆ, ಹೆಚ್ಚಿನ ನಿರಾಶ್ರಿತರು ಮ್ಯಾನ್ಮಾರ್ ಅಧಿಕಾರಿಗಳ ಭರವಸೆಯ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿದ್ದಾರೆ ಹಾಗೂ ಮ್ಯಾನ್ಮಾರ್‌ಗೆ ಹಿಂದಿರುಗುವುದು ಅತ್ಯಂತ ಅಪಾಯಕಾರಿ ಎಂದು ಭಾವಿಸಿದ್ದಾರೆ.