ಒಲಿಂಪಿಕ್ಸ್ ಟೆಸ್ಟ್ ಇವೆಂಟ್: ಭಾರತ ಮಹಿಳಾ ತಂಡದ ಗೆಲುವಿನ ಆರಂಭ

Update: 2019-08-17 18:24 GMT

ಟೋಕಿಯೊ, ಆ.17: ಭಾರತೀಯ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್ ಟೆಸ್ಟ್ ಇವೆಂಟ್‌ನಲ್ಲಿ ಶನಿವಾರ ಗೆಲುವಿನ ಆರಂಭ ಪಡೆದಿದೆ.

 ಭಾರತ ಆತಿಥೇಯ ಜಪಾನ್ ತಂಡದ ವಿರುದ್ಧ 2-1 ಗೋಲುಗಳ ಅಂತರದಿಂದ ಜಯ ಸಾಧಿಸಿದೆ.

ಪೆನಾಲ್ಟಿಕಾರ್ನರ್ ಸ್ಪೆಷಲಿಸ್ಟ್ ಗುರ್ಜೀತ್ ಕೌರ್ 9ನೇ ನಿಮಿಷದಲ್ಲಿ ಗಳಿಸಿದ ಗೋಲು ನೆರವಿನಿಂದ ಭಾರತ ಆರಂಭದಲ್ಲೇ ಮುನ್ನಡೆ ಸಾಧಿಸಿತು. ಆದರೆ, ಆತಿಥೇಯ ತಂಡ ಅಕಿ ಮಿಟ್ಸುಹಾಶಿ 16ನೇ ನಿಮಿಷದಲ್ಲಿ ಬಾರಿಸಿದ ಗೋಲಿನ ಸಹಾಯದಿಂದ ಸ್ಕೋರನ್ನು 1-1ರಿಂದ ಸಮಬಲಗೊಳಿಸಿತು.

ಗುರ್ಜೀತ್ ಕೌರ್ 35ನೇ ನಿಮಿಷದಲ್ಲಿ ಮತ್ತೊಮ್ಮೆ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು.

 ಭಾರತ ತಂಡ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಮೊದಲ 10 ನಿಮಿಷಗಳ ಆಟದಲ್ಲಿ ಕೆಲವು ಅವಕಾಶವನ್ನು ಪಡೆಯಿತು.

ಉಭಯ ತಂಡಗಳು ಒಲಿಂಪಿಕ್ ಗೇಮ್ಸ್ ಮಾರ್ಗದರ್ಶಿ ಸೂತ್ರದ ಪ್ರಕಾರ ತಲಾ 16 ಆಟಗಾರರನ್ನು ಕಣಕ್ಕಿಳಿಸಿದವು. ಪಂದ್ಯದುದ್ದಕ್ಕೂ ಬದಲಿ ಆಟಗಾರರನ್ನು ಆಡಿದವು. 16ನೇ ನಿಮಿಷದಲ್ಲಿ ಜಪಾನ್‌ನಬದಲಿ ಆಟಗಾರ್ತಿ 29ರ ವಯಸ್ಸಿನ ಮಿಟ್ಸುಹಾಶಿ ತನ್ನ ತಂಡದ ಪರ ಏಕೈಕ ಗೋಲು ಬಾರಿಸಿದರು.

ಉಭಯ ತಂಡಗಳು ಕಳೆದ ಕೆಲವು ವರ್ಷಗಳಿಂದ ಪರಸ್ಪರ ಮುಖಾಮುಖಿಯಾಗುತ್ತಿವೆ. ತಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಚೆನ್ನಾಗಿ ಅರಿತುಕೊಂಡಿರುವ ಕಾರಣ ಮೊದಲಾರ್ಧದ ಅಂತ್ಯದಲ್ಲಿ 1-1ರಿಂದ ಸಮಬಲ ಸಾಧಿಸಿದವು.

35ನೇ ನಿಮಿಷದಲ್ಲಿ 23ರ ಹರೆಯದ ಗುರ್ಜೀತ್ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಭಾರತಕ್ಕೆ 2-1 ಮುನ್ನಡೆ ಸಿಗಲು ನೆರವಾದರು. ಆತಿಥೇಯ ತಂಡ ಕೊನೆಯ ತನಕ ಮತ್ತೊಂದು ಗೋಲು ಗಳಿಸಿ ಸಮಬಲ ಸಾಧಿಸಲು ಪ್ರಯತ್ನಿಸಿತ್ತು. ಆದರೆ, ಅವಕಾಶವನ್ನು ಗೋಲಾಗಿ ಪರಿವರ್ತಿಸಲು ವಿಫಲವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News