ಸಿನ್ಸಿನಾಟಿ ಟೆನಿಸ್ ಟೂರ್ನಮೆಂಟ್: ಬಾರ್ಟಿ ಸೆಮಿ ಫೈನಲ್‌ಗೆ

Update: 2019-08-17 18:30 GMT

ಸಿನ್ಸಿನಾಟಿ, ಆ.17: ಆಸ್ಟ್ರೇಲಿಯದ ಆಟಗಾರ್ತಿ ಅಶ್ಲೆಘ್ ಬಾರ್ಟಿ ಸಿನ್ಸಿನಾಟಿ ಟೆನಿಸ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್ ತಲುಪಿದ್ದಾರೆ. ಇದರೊಂದಿಗೆ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಮರಳುವತ್ತ ಹೆಜ್ಜೆ ಇಟ್ಟಿದ್ದಾರೆ. ಹಾಲಿ ನಂ.1 ಆಟಗಾರ್ತಿ ನವೊಮಿ ಒಸಾಕಾ ಮಂಡಿನೋವಿನಿಂದ ಗಾಯಾಳು ನಿವೃತ್ತಿಯಾದರು.

 ಅಗ್ರ ಶ್ರೇಯಾಂಕದ ಆಟಗಾರ್ತಿ ಬಾರ್ಟಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಮರಿಯಾ ಸಕ್ಕಾರಿ ಅವರನ್ನು 5-7, 6-2, 6-0 ಸೆಟ್‌ಗಳಿಂದ ಮಣಿಸಿದರು. ಫ್ರೆಂಚ್ ಓಪನ್ ಚಾಂಪಿಯನ್ ಬಾರ್ಟಿ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ರಶ್ಯದ ಹಿರಿಯ ಆಟಗಾರ್ತಿ ಸ್ವೆತ್ಲಾನಾ ಕುಝ್ನೆಸೋವಾರನ್ನು ಎದುರಿಸಲಿದ್ದಾರೆ. ಕುಝ್ನೆಸೋವಾ ಮೂರನೇ ಶ್ರೇಯಾಂಕದ ಕರೊಲಿನಾ ಪ್ಲಿಸ್ಕೋವಾ ವಿರುದ್ಧ 3-6, 7-6(7/2), 6-3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ಈ ಸೋಲಿನೊಂದಿಗೆ ಝೆಕ್‌ನ ಪ್ಲಿಸ್ಕೋವಾ ಅವರ ನಂ.1 ಸ್ಥಾನದ ಕನಸು ಭಗ್ನಗೊಂಡಿದೆ.

ಯುಎಸ್ ಓಪನ್ ಟೂರ್ನಿಗೆ ಇನ್ನು ಎರಡು ವಾರಗಳಷ್ಟೇ ಬಾಕಿ ಇರುವಾಗ ಜಪಾನ್ ಆಟಗಾರ್ತಿ ಒಸಾಕಾಗೆ ಎಚ್ಚರಿಕೆ ಗಂಟೆಯೊಂದು ಬಾರಿಸಿದೆ. ಒಸಾಕಾ ಶುಕ್ರವಾರ ನಡೆದ ಮತ್ತೊಂದು ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸೊಫಿಯಾ ಕೆನಿನ್ ವಿರುದ್ಧ ಆಡುವಾಗ ಎಡ ಮಂಡಿಗೆ ಗಾಯವಾಗಿ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಅಮೆರಿಕದ ಆಟಗಾರ್ತಿ 6-4, 1-6, 2-0 ಅಂತರದ ಗೆಲುವಿನೊಂದಿಗೆ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.

ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಕ್ ಅವರು ಲುಕಾಸ್ ಪೌಲಿ ವಿರುದ್ಧ 7-6,(7/2), 6-1 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಪಂದ್ಯದ ವೇಳೆ ಬಲಮೊಣಕೈ ಸೆಳೆತಕ್ಕೆ ಒಳಗಾಗಿದ್ದು, ಮುಂಬರುವ ಪಂದ್ಯದಲ್ಲಿ ಸಂಪೂರ್ಣ ಚೇತರಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

16 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಡೆನಿಲ್ ಮೆಡ್ವೆಡೆವ್‌ರನ್ನು ಎದುರಿಸಲಿದ್ದಾರೆ. ರಶ್ಯದ ಮೆಡ್ವೆಡೆವ್ ಸಹ ಆಟಗಾರ ಆ್ಯಂಡ್ರೂ ರುಬ್ಲೆವ್‌ರನ್ನು 6-2, 6-3 ನೇರ ಸೆಟ್‌ಗಳಿಂದ ಮಣಿಸಿದ್ದಾರೆ. ರುಬ್ಲೇವ್ ಕಳೆದ ವಾರ ರೋಜರ್ ಫೆಡರರ್‌ರನ್ನು ಮಣಿಸಿದ್ದರು. ಫ್ರಾನ್ಸ್‌ನ ರಿಚರ್ಡ್ ಗಾಸ್ಕಟ್ ಆರು ವರ್ಷಗಳ ಬಳಿಕ ಮಾಸ್ಟರ್ಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಯಶಾಲಿಯಾದರು. ಎದುರಾಳಿ ರೊಬರ್ಟೊ ಬೌಟಿಸ್ಟಾ ಅಗುಟ್‌ರನ್ನು 7-6(7/2), 3-6, 6-2 ಸೆಟ್‌ಗಳಿಂದ ಮಣಿಸಿ ಸೆಮಿ ಫೈನಲ್‌ಗೆ ತಲುಪಿದರು. ಮುಂದಿನ ಸುತ್ತಿನಲ್ಲಿ 16ನೇ ಶ್ರೇಯಾಂಕದ ಡೇವಿಡ್ ಗೊಫಿನ್‌ರನ್ನು ಎದುರಿಸಲಿದ್ದಾರೆ. ಗೊಫಿನ್ ಎದುರಾಳಿ ಜಪಾನ್‌ನ ಯುವ ಆಟಗಾರ ಯೊಶಿಹಿಟೊ ನಿಶಿಯೊಕಾ ಜ್ವರದಿಂದಾಗಿ ಪಂದ್ಯ ಆಡದ ಹಿನ್ನೆಲೆಯಲ್ಲಿ ಗೊಫಿನ್ ಸೆಮಿ ಫೈನಲ್‌ಗೆ ಪ್ರವೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News