ಮಧ್ಯಪ್ರದೇಶದ ಓಟಗಾರನಿಗೆ ಬೋಲ್ಟ್ ದಾಖಲೆ ಮುರಿಯುವ ಕನಸು

Update: 2019-08-18 18:03 GMT

ಭೋಪಾಲ್, ಆ.18: ಬರಿಗಾಲಲ್ಲಿ ಹನ್ನೊಂದು ಸೆಕೆಂಡ್‌ಗಳಲ್ಲಿ ನೂರು ಮೀಟರ್ ಓಡಿದ ಮಧ್ಯಪ್ರದೇಶದ 19 ಹರೆಯದ ಓಟಗಾರ ರಾಮೇಶ್ವರ್ ಸಿಂಗ್ ಗುರ್ಜಾರ್‌ಗೆ ವಿಶ್ವದ ಓಟದ ರಾಜ ಜಮೈಕಾದ ಉಸೈನ್ ಬೋಲ್ಟ್ ದಾಖಲೆಯನ್ನು ಮುರಿಯುವ ಕನಸು ಕಾಣುತ್ತಿದ್ದಾರೆ.

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ನಾರ್ವಾರ್‌ನ ಕೃಷಿಕ ಕುಟುಂಬದ ರಾಮೇಶ್ವರ್ ಅವರು 11 ಸೆಕೆಂಡ್‌ಗಳಲ್ಲಿ 100 ಮೀಟರ್ ಓಡಿರುವ ವೀಡಿಯೊ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೊವನ್ನು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಪ್ರತಿಭೆಗೆ ಸೂಕ್ತ ಅವಕಾಶ ದೊರೆಯಬೇಕೆಂದು ಕ್ರೀಡಾಸಚಿವರನ್ನು ಒತ್ತಾಯಿಸಿದ್ದರು.

ರಾಮೇಶ್ವರ್ ಅವರ ಓಟದ ವೀಡಿಯೊವನ್ನು ವೀಕ್ಷಿಸಿದ ರಾಜ್ಯ ಕ್ರೀಡಾ ಸಚಿವ ಜಿತು ಪಾಟ್ವಾರಿ ಅವರು ರಾಮೇಶ್ವರ್‌ಗೆ ತಮ್ಮನ್ನು ಭೇಟಿಯಾಗುವಂತೆ ಸಲಹೆ ನೀಡಿದ್ದರು.

ರಾಮೇಶ್ವರ್ ಶನಿವಾರ ಭೋಪಾಲ್‌ಗೆ ಆಗಮಿಸಿ ಕ್ರೀಡಾ ಸಚಿವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಮೇಶ್ವರ್ ಉಸೈನ್ ಬೋಲ್ಟ್ 9.5 ಸೆಕೆಂಡ್‌ಗಳಲ್ಲಿ 100 ಮೀಟರ್ ಓಟದಲ್ಲಿ ಗುರಿ ಮುಟ್ಟಿದ್ದರು. ನನಗೆ ಸೂಕ್ತ ತರಬೇತಿ ನೀಡಿದಲ್ಲಿ ನಾನು ಬೋಲ್ಟ್ ದಾಖಲೆಯನ್ನು ಮುರಿಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಮೇಶ್ವರ್ ಕಳೆದ 6 ತಿಂಗಳಿನಿಂದ 100 ಮೀಟರ್ ಓಟದ ಅಭ್ಯಾಸ ನಡೆಸುತ್ತಿದ್ದಾರೆ. ಆರ್ಮಿಗೆ ಸೇರಲು ವಿಫಲವಾದ ಬಳಿಕ ಓಟದ ಅಭ್ಯಾಸ ನಡೆಸುತ್ತಿದ್ದಾರೆ. ‘‘ಮೊದಲು ನಾನು 12 ಸೆಕೆಂಡ್‌ಗಳಲ್ಲಿ 100 ಮೀಟರ್ ಓಟವನ್ನು ಕ್ರಮಿಸಿದ್ದೆ. ಆರು ತಿಂಗಳ ಅಭ್ಯಾಸ ಬಳಿಕ 11 ಸೆಕೆಂಡ್‌ಗಳಲ್ಲಿ ಗುರಿ ತಲುಪಲು ಸಾಧ್ಯವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪೌಷ್ಟಿಕಾಂಶದ ಕೊರತೆಯಿಂದಾಗಿ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳಿದ್ದಾರೆ.

ರಾಮೇಶ್ವರ್ ಗುರ್ಜಾರ್ ಓಡುವ ವೀಡಿಯೊ ವೀಕ್ಷಿಸಿದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆತನನ್ನು ತನ್ನ ಹತ್ತಿರ ಆ ಯುವಕನನ್ನು ಕರೆದು ತನ್ನಿ.ತರಬೇತಿ ಸಂಸ್ಥೆಯೊಂದಕ್ಕೆ ನೋಂದಣಿ ಮಾಡಿಸುವುದಾಗಿ ಹೇಳಿದ್ದಾರೆ.

ರಾಮೇಶ್ವರ್ 10ನೇ ತರಗತಿ ತನಕ ಶಿಕ್ಷಣ ಪಡೆದಿದ್ದಾರೆ. ಕುಟುಂಬ ಆರ್ಥಿಕವಾಗಿ ಹಿಂದುಳಿದ ಕಾರಣದಿಂದಾಗಿ ಅವರಿಗೆ ಮುಂದಕ್ಕೆ ಹೋಗಲು ಸಾಧ್ಯವಾಗಿಲ್ಲ. 2009ರಲ್ಲಿ ಉಸೈನ್ ಬೋಲ್ಟ್ 9.58 ಸೆಕೆಂಡ್‌ಗಳಲ್ಲಿ 100 ಮೀಟರ್ ಗುರಿಯನ್ನು ತಲುಪಿ ದಾಖಲೆ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News