ಹೊಂಡುರಾಸ್‌ನಲ್ಲಿ ಫುಟ್ಬಾಲ್ ಅಭಿಮಾನಿಗಳ ನಡುವೆ ಘರ್ಷಣೆ: 3 ಸಾವು

Update: 2019-08-18 18:05 GMT

ಟೆಗುಸಿಗಲ್ಪಾ, ಆ.18: ಇಲ್ಲಿನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಹೊಂಡುರಾಸ್‌ನ ಒಲಿಂಪಿಯಾ ಮತ್ತು ಮೊಟಾಗುವಾ ಫುಟ್ಬಾಲ್ ತಂಡಗಳ ನಡುವಿನ ಪಂದ್ಯದ ವೇಳೆ ಸಂಭವಿಸಿದ ಘರ್ಷಣೆಯಲ್ಲಿ 3ಮಂದಿ ಮೃತಪಟ್ಟು 10ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ವರದಿಯಾಗಿದೆ.

ನ್ಯಾಶನಲ್ ಚಾಂಪಿಯನ್‌ಶಿಪ್ ಪಂದ್ಯದ ವೇಳೆ ಎರಡೂ ತಂಡಗಳ ಅಭಿಮಾನಿಗಳ ನಡುವೆ ಘರ್ಷಣೆ ಸಂಭವಿಸಿದ್ದು, ಹಳೆಯ ದ್ವೇಷವೇ ಘರ್ಷಣೆಗೆ ಕಾರಣ ಎಂದು ತಿಳದಿದು ಬಂದಿದೆ.

ಟೆಗುಸಿಗಲ್ಪಾ ರಾಷ್ಟ್ರೀಯ ಕ್ರೀಡಾಂಗಣದ ಹೊರಗಡೆ ಮೊಟಾಗುವಾ ತಂಡದ ಆಟಗಾರರು ತೆರಳುತ್ತಿದ್ದ ಬಸ್‌ನ ಮೇಲೆ ಕಲ್ಲು ತೂರಾಟ ನಡೆದ ಪರಿಣಾಮವಾಗಿ ಬಸ್‌ನಲ್ಲಿದ್ದ ಮೂವರು ಆಟಗಾರರು ಗಾಯಗೊಂಡರು. ಗಾಯಗೊಂಡಿರುವ ಆಟಗಾರರಾದ ಎಮಿಲಿಯಾ ಇಝಾಗುಯಿರ್ರೆ, ರಾಬರ್ಟೊ ಮೊರೆರಾ ಮತ್ತು ಜೋನಾಥನ್ ರೂಗಿಯರ್ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದರ ಬೆನ್ನಲ್ಲೇ ಹಿಂಸಾಚಾರ ಕಾಣಿಸಿಕೊಂಡಿತೆನ್ನಲಾಗಿದೆ. ಬಸ್‌ನ ಮೇಲೆ ದುಷ್ಕರ್ಮಿಗಳು ಬಾಟಲಿ ಮತ್ತು ಕಲ್ಲು ತೂರಾಟ ನಡೆಸಿದರೆಂದು ನೊಟಾಗುವಾ ತಂಡದ ಕೋಚ್ ಡಿಯಾಗೊ ವ್ಯಾಸ್‌ಗುಝ್ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಘಟನೆ ನಡೆಯುವ ಹೊತ್ತಿಗೆ ಕ್ರೀಡಾಂಗಣದಲ್ಲಿ 10 ಸಾವಿರಕ್ಕೂ ಅಧಿಕ ಫುಟ್ಬಾಲ್ ಅಭಿಮಾನಿಗಳು ಇದ್ದರು. ಕಾಲ್ತುಳಿತ ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ, ಲಾಠಿ ಪ್ರಹಾರ ನಡೆಸಿದರು ಎಂದು ತಿಳಿದು ಬಂದಿದೆ.

ಹಿಂಸಾಚಾರದ ಕಾರಣದಿಂದಾಗಿ ಎರಡು ತಂಡಗಳ ನಡುವೆ ನಡೆಯಬೇಕಿದ್ದ ನ್ಯಾಶನಲ್ ಚಾಂಪಿಯನ್‌ಶಿಪ್‌ನ ಪಂದ್ಯ ರದ್ದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News