ಜಿಬ್ರಾಲ್ಟರ್‌ನಿಂದ ಹೊರಟ ಇರಾನ್ ತೈಲ ಟ್ಯಾಂಕರ್

Update: 2019-08-19 16:51 GMT

ಜಿಬ್ರಾಲ್ಟರ್, ಆ. 19: ಇರಾನ್‌ನ ತೈಲ ಟ್ಯಾಂಕರನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಅಮೆರಿಕ ಮಾಡಿರುವ ಒತ್ತಾಯವನ್ನು ಬ್ರಿಟಿಶ್ ಭೂಭಾಗ ಜಿಬ್ರಾಲ್ಟರ್ ತಿರಸ್ಕರಿಸಿದ ಬಳಿಕ, ಟ್ಯಾಂಕರ್ ಅಲ್ಲಿಂದ ಹೊರಟಿದೆ.

ಇರಾನ್‌ನ ತೈಲ ಟ್ಯಾಂಕರ್ ‘ಗ್ರೇಸ್ 1’ನ್ನು ಬ್ರಿಟನ್ ನೌಕಾ ಪಡೆಯು ಜುಲೈ 4ರಂದು ನಿಲ್ಲಿಸಿ ಜಿಬ್ರಾಲ್ಟರ್ ಕರಾವಳಿಯಲ್ಲಿ ಇರಿಸಿತ್ತು. ಐರೋಪ್ಯ ಒಕ್ಕೂಟದ ದಿಗ್ಬಂಧನಗಳನ್ನು ಉಲ್ಲಂಘಿಸಿ ಟ್ಯಾಂಕರ್ ಸಿರಿಯಕ್ಕೆ ತೈಲ ಸಾಗಿಸುತ್ತಿದೆ ಎಂಬ ಸಂಶಯದಲ್ಲಿ ಅದನ್ನು ಜಿಬ್ರಾಲ್ಟರ್ ವಶಕ್ಕೆ ತೆಗೆದುಕೊಂಡಿತ್ತು.

ರವಿವಾರ ಸಂಜೆ ಸೂಪರ್ ಟ್ಯಾಂಕರ್‌ನ ಲಂಗರನ್ನು ಎತ್ತಲಾಗಿದೆ ಹಾಗೂ ಅದು ಈಗ ದಕ್ಷಿಣದತ್ತ ಸಾಗುತ್ತಿದೆ.

ಟ್ಯಾಂಕರನ್ನು ಬಿಡುಗಡೆ ಮಾಡುವಂತೆ ಜಿಬ್ರಾಲ್ಟರ್‌ನ ಸುಪ್ರೀಂ ಕೋರ್ಟ್ ಗುರುವಾರ ಆದೇಶ ನೀಡಿತ್ತು.

ಟ್ಯಾಂಕರ್‌ನ ಹೆಸರನ್ನು ಈಗ ‘ಅಡ್ರಿಯಾನ್ ಡಾರ್ಯ’ ಎಂಬುದಾಗಿ ಬದಲಿಸಲಾಗಿದೆ. ಟ್ಯಾಂಕರ್ ಮತ್ತು ಅದರಲ್ಲಿರುವ 21 ಲಕ್ಷ ಬ್ಯಾರಲ್ ತೈಲವನ್ನು ಸಾಗಿಸಲು ಹೊಸ ನಾವಿಕರು ಆಗಮಿಸಿದ್ದಾರೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ.

ಟ್ಯಾಂಕರ್ ವಶಪಡಿಸುವ ವಿರುದ್ಧ ಅಮೆರಿಕಕ್ಕೆ ಎಚ್ಚರಿಕೆ ನೀಡಿದ ಇರಾನ್

ತನ್ನ ತೈಲ ಟ್ಯಾಂಕರ್ ಜಿಬ್ರಾಲ್ಟರ್‌ನಿಂದ ಹೊರಹೋದ ಬಳಿಕ, ಮುಕ್ತ ಸಮುದ್ರದಲ್ಲಿ ಅದನ್ನು ವಶಪಡಿಸಿಕೊಳ್ಳಲು ಹೊಸ ಪ್ರಯತ್ನಗಳನ್ನು ಮಾಡದಂತೆ ಇರಾನ್ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ ಎಂದು ಇರಾನ್ ವಿದೇಶ ಸಚಿವಾಲಯದ ವಕ್ತಾರರು ಸೋಮವಾರ ಸರಕಾರಿ ಟೆಲಿವಿಶನ್‌ನಲ್ಲಿ ಹೇಳಿದ್ದಾರೆ.

ಜಿಬ್ರಾಲ್ಟರ್‌ನಿಂದ ಹೊರ ಬಂದಿರುವ ಇರಾನ್ ತೈಲ ಟ್ಯಾಂಕರ್ ಸೋಮವಾರ ಗ್ರೀಸ್‌ನತ್ತ ತೆರಳುತ್ತಿದೆ ಎನ್ನುವುದನ್ನು ನೌಕಾಯಾನ ಅಂಕಿಅಂಶಗಳು ತೋರಿಸಿವೆ.

ಹಡಗು ಜಿಬ್ರಾಲ್ಟರ್‌ನಿಂದ ಹೊರ ಹೋದ ಬಳಿಕ, ಅದನ್ನು ವಶಪಡಿಸಿಕೊಳ್ಳಬೇಕೆಂಬ ತನ್ನ ಬೇಡಿಕೆಯನ್ನು ಅಮೆರಿಕ ನವೀಕರಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಇರಾನ್ ವಿದೇಶ ಸಚಿವಾಲಯದ ವಕ್ತಾರ ಅಬ್ಬಾಸ್ ವೌಸವಿ, ‘‘ಇಂಥ ಕೃತ್ಯವು ಮುಕ್ತ ಸಾಗರದಲಿ ಸಂಚರಿಸುವ ಹಡಗುಗಳ ಸುರಕ್ಷತೆಗೆ ಅಪಾಯ ಒಡ್ಡುತ್ತದೆ. ನಾವು ಅಧಿಕೃತ ಮಾರ್ಗಗಳ ಮೂಲಕ, ಅದರಲ್ಲೂ ಮುಖ್ಯವಾಗಿ ಸ್ವಿಸ್ ರಾಯಭಾರ ಕಚೇರಿ ಮೂಲಕ ಎಚ್ಚರಿಕೆ ನೀಡಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News