ಇರಾನ್ ತೈಲ್ ಟ್ಯಾಂಕರ್‌ಗೆ ಸಹಾಯ ಮಾಡಿದರೆ ದಿಗ್ಬಂಧನ: ಮೈಕ್ ಪಾಂಪಿಯೊ ಎಚ್ಚರಿಕೆ

Update: 2019-08-21 18:29 GMT

ವಿಶ್ವಸಂಸ್ಥೆ, ಆ. 21: ಕಚ್ಚಾ ತೈಲವನ್ನು ಒಯ್ಯುತ್ತಿರುವ ಇರಾನ್ ತೈಲ ಟ್ಯಾಂಕರ್‌ಗೆ ಲಂಗರು ಹಾಕಲು ಯಾರಾದರೂ ಅವಕಾಶ ನೀಡಿದರೆ, ಅವರು ಅಮೆರಿಕದ ದಿಗ್ಬಂಧನವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಎಚ್ಚರಿಕೆ ನೀಡಿದ್ದಾರೆ.

‘‘ರವಿವಾರ ಜಿಬ್ರಾಲ್ಟರ್‌ನಿಂದ ಹೊರಟ ಇರಾನ್‌ನ ಸೂಪರ್‌ಟ್ಯಾಂಕರ್ ಮತ್ತೊಮ್ಮೆ ಸಿರಿಯದತ್ತ ಮುಖ ಮಾಡಿದರೆ, ಇದಕ್ಕೆ ಸಂಬಂಧಿಸಿದ ದಿಗ್ಬಂಧನಗಳಿಗೆ ಅನುಗುಣವಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ’’ ಎಂದು ಮಂಗಳವಾರ ವರದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ಐರೋಪ್ಯ ಒಕ್ಕೂಟವು ಸಿರಿಯ ವಿರುದ್ಧ ವಿಧಿಸಿರುವ ದಿಗ್ಬಂಧನಗಳನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪದಲ್ಲಿ ಇರಾನ್‌ನ ತೈಲ ಹಡಗನ್ನು ಒಂದು ತಿಂಗಳಿಗೂ ಅಧಿಕ ಅವಧಿಗೆ ಜಿಬ್ರಾಲ್ಟರ್‌ನಲ್ಲಿ ತಡೆದು ನಿಲ್ಲಿಸಲಾಗಿತ್ತು.

‘‘ಕಚ್ಚಾ ತೈಲವು ಸಿರಿಯಕ್ಕೆ ಹೋಗುವುದನ್ನು ಅಮೆರಿಕ ಬಯಸುವುದಿಲ್ಲ. ಯಾಕೆಂದರೆ ಸಿರಿಯದಲ್ಲಿ ತೈಲವನ್ನು ‘ಕುದ್ಸ್’ ಪಡೆಗಳ ಬಳಕೆಗೆ ನೀಡಲಾಗುತ್ತದೆ. ಈ ಪಡೆಗಳು ಜಗತ್ತಿನಾದ್ಯಂತ ಅಸಂಖ್ಯಾತ ಅಮೆರಿಕನ್ನರು ಹಾಗೂ ಇತರರನ್ನು ಹತ್ಯೆ ಮಾಡಿದೆ’’ ಎಂದು ಪಾಂಪಿಯೊ ಹೇಳಿದರು.

ಕುದ್ಸ್ ಪಡೆ ಇರಾನ್‌ನ ರೆವಲೂಶನರಿ ಗಾರ್ಡ್ಸ್‌ನ ಒಂದು ಭಾಗವಾಗಿದೆ ಹಾಗೂ ಅದು ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News