ಭಾರತ-ಪಾಕ್ ಡೇವಿಸ್ ಕಪ್ ಪಂದ್ಯ ನವೆಂಬರ್‌ಗೆ ಮುಂದೂಡಿಕೆ

Update: 2019-08-22 18:07 GMT

ಚೆನ್ನೈ, ಆ.22: ಪಾಕಿಸ್ತಾನದ ವಿರುದ್ಧ ಭಾರತದ ಏಶ್ಯ ಒಶಿಯಾನಿಯ ಗ್ರೂಪ್-1 ಡೇವಿಸ್ ಕಪ್ ಪಂದ್ಯವನ್ನು ಅಂತರ್‌ರಾಷ್ಟ್ರೀಯ ಟೆನಿಸ್ ಒಕ್ಕೂಟ(ಐಟಿಎಫ್)ನವೆಂಬರ್‌ಗೆ ಮುಂದೂಡಿದೆ. ಈ ಬೆಳವಣಿಗೆ ಭಾರತದ ಟೆನಿಸ್ ಸಮುದಾಯಕ್ಕೆ ನಿಟ್ಟುಸಿರುಬಿಡುವಂತೆ ಮಾಡಿದೆ.

ಡೇವಿಸ್ ಕಪ್ ಪಂದ್ಯ ಸೆಪ್ಟಂಬರ್ 14 ಹಾಗೂ 15ರಂದು ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿತ್ತು. ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚಳವಾದ ಕಾರಣ ಭಾರತ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಪ್ರಯಾಣಿಸುವ ಸ್ಥಿತಿಯಲ್ಲಿರಲಿಲ್ಲ.

ಎಐಟಿಎ ಹಾಗೂ ಐಟಿಎಫ್‌ನೊಂದಿಗೆ ಕ್ರಮವಾಗಿ ಸೋಮವಾರ ಹಾಗೂ ಮಂಗಳವಾರ ನಿಗದಿಯಾಗಿದ್ದ ಸಭೆ ರದ್ದುಗೊಂಡ ಬಳಿಕ ಡೇವಿಸ್ ಕಪ್ ಸಮಿತಿಯು ಗುರುವಾರ ಈ ನಿರ್ಧಾರ ಕೈಗೊಂಡಿದೆ.

ಸ್ವತಂತ್ರ ತಜ್ಞ ಭದ್ರತಾ ಸಲಹೆಗಾರರು ಪಾಕಿಸ್ತಾನದ ಪ್ರಸ್ತುತ ಭದ್ರತೆಯನ್ನು ಪರಿಶೀಲನೆ ನಡೆಸಿದ ಬಳಿಕ ಇಸ್ಲಾಮಾಬಾದ್‌ನಲ್ಲಿ ಭಾರತ-ಪಾಕ್ ನಡುವೆ ನಿಗದಿಯಾಗಿರುವ ಡೇವಿಸ್ ಕಪ್ ಪಂದ್ಯವನ್ನು ಮುಂದೂಡುವ ಕುರಿತು ಡೇವಿಸ್ ಕಪ್ ಸಮಿತಿ ನಿರ್ಧರಿಸಿದೆ. ಇದೊಂದು ಅಸಾಧಾರಣ ಪರಿಸ್ಥಿತಿ ಎಂಬ ನಿರ್ಣಯಕ್ಕೆ ಬಂದಿರುವ ಸಮಿತಿಯು ಅಥ್ಲೀಟ್‌ಗಳು, ಅಧಿಕಾರಿಗಳು ಹಾಗೂ ಪ್ರೇಕ್ಷಕರ ಸುರಕ್ಷೆ ಹಾಗೂ ಭದ್ರತೆ ಐಟಿಎಫ್‌ನ ಮೊದಲ ಆದ್ಯತೆಯಾಗಿದೆ ಎಂದಿದೆ. ಡೇವಿಸ್ ಕಪ್ ಪಂದ್ಯವನ್ನು ನವೆಂಬರ್‌ಗೆ ಮರು ನಿಗದಿಪಡಿಸಲಾಗುವುದು. ಸಮಿತಿಯು ಸೆ.9ರಂದು ಸರಿಯಾದ ದಿನಾಂಕವನ್ನು ದೃಢಪಡಿಸಲಿದೆ. ಐಟಿಎಫ್ ಪಾಕ್‌ನ ಪರಿಸ್ಥಿತಿಯ ಪರಿಶೀಲನೆಯನ್ನು ಮುಂದುವರಿಸಲಿದ್ದು, ಪಂದ್ಯಕ್ಕಿಂತ ಮೊದಲು ಡೇವಿಸ್ ಕಪ್ ಸಮಿತಿಯು ಭದ್ರತಾ ಪರಿಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲನೆ ನಡೆಸಲಿದೆ ಎಂದು ಐಟಿಎಫ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News