ಎರಡನೇ ಟೆಸ್ಟ್: ಲಥಾಮ್ ಶತಕ, ಮುನ್ನಡೆಯತ್ತ ನ್ಯೂಝಿಲ್ಯಾಂಡ್

Update: 2019-08-24 18:29 GMT

ಕೊಲಂಬೊ, ಆ.24: ಎರಡನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಶ್ರೀಲಂಕಾದ ಮೊದಲ ಇನಿಂಗ್ಸ್ 244 ರನ್‌ಗೆ ದಿಟ್ಟ ಉತ್ತರ ನೀಡಲು ಹೊರಟಿರುವ ನ್ಯೂಝಿಲ್ಯಾಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 196 ರನ್ ಗಳಿಸಿದೆ.

  ಔಟಾಗದೆ 111 ರನ್(184 ಎಸೆತ, 10 ಬೌಂಡರಿ) ಗಳಿಸಿರುವ ಟಾಮ್ ಲಥಾಮ್ ಶನಿವಾರ ಮೂರನೇ ದಿನದಾಟದಂತ್ಯಕ್ಕೆ ನ್ಯೂಝಿಲ್ಯಾಂಡ್ ತಂಡ ಉತ್ತಮ ಮುನ್ನಡೆಯತ್ತ ಸಾಗಲು ನೆರವಾಗಿದ್ದಾರೆ. ಸ್ಪಿನ್ನರ್‌ಗಳಿಗೆ ನೆರವಾಗುವ ಪಿಚ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಕಿವೀಸ್ ಆತಿಥೇಯರ ಮೊದಲ ಇನಿಂಗ್ಸ್‌ಗಿಂತ 48 ರನ್ ಹಿನ್ನಡೆಯಲ್ಲಿದೆ.

ಲಥಾಮ್ ಹಾಗೂ ಬಿಜೆ ವಾಟ್ಲಿಂಗ್(ಔಟಾಗದೆ 25)ಐದನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 70 ರನ್ ಗಳಿಸಿ ತಂಡವನ್ನು ಆಧರಿಸಿದ್ದಾರೆ.

ನಾಯಕ ಕೇನ್ ವಿಲಿಯಮ್ಸನ್ ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಕೇವಲ 20 ರನ್ ಗಳಿಸಿ ವೇಗದ ಬೌಲರ್ ಲಹಿರು ಕುಮಾರಗೆ ವಿಕೆಟ್ ಒಪ್ಪಿಸಿದರು. ಅನುಭವಿ ಆಟಗಾರ ರಾಸ್ ಟೇಲರ್ 23 ರನ್ ಗಳಿಸಿದ್ದಾರೆ.

 ದಿಲ್ರುವಾನ್ ಪೆರೇರ ಅವರು ಹೆನ್ರಿ ನಿಕೊಲ್ಸ್(15) ವಿಕೆಟ್ ಉರುಳಿಸಿದಾಗ ನ್ಯೂಝಿಲ್ಯಾಂಡ್ 126 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಲಥಾಮ್ ಹಾಗೂ ವಾಟ್ಲಿಂಗ್ ಕೊನೆಯ ಅವಧಿಯಲ್ಲಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ತಂಡವನ್ನು ಆಧರಿಸಿದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ಗರಿಷ್ಠ ವೈಯಕ್ತಿಕ ಟೆಸ್ಟ್ ಸ್ಕೋರ್(264)ಗಳಿಸಿದ್ದ ಲಥಾಮ್ ಅವರು ಪೆರೇರ ಎಸೆತವನ್ನು ಬೌಂಡರಿ ಗೆರೆ ದಾಟಿಸಿ 10ನೇ ಶತಕ ಪೂರೈಸಿದರು.

ಮಳೆಯಿಂದಾಗಿ ಮೊದಲೆರಡು ದಿನದಾಟದಲ್ಲಿ ಕೇವಲ 66 ಓವರ್‌ಗಳ ಬ್ಯಾಟಿಂಗ್ ಸಾಧ್ಯವಾಗಿತ್ತು. ಐದನೇ ಟೆಸ್ಟ್ ಶತಕ ಸಿಡಿಸಿದ ಧನಂಜಯ ಡಿಸಿಲ್ವಾ ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿಗೌರವಾರ್ಹ ಮೊತ್ತ ಗಳಿಸಲು ಸಹಾಯವಾದರು. ಶುಕ್ರವಾರ ಡಿಸಿಲ್ವಾ 9 ರನ್ ಗಳಿಸಿದ್ದಾಗ ಜೀವದಾನ ನೀಡಿದ್ದ ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ಅವರು ಡಿಸಿಲ್ವಾರನ್ನು 109 ರನ್‌ಗೆ ಔಟ್ ಮಾಡಿದರು. ಇನಿಂಗ್ಸ್ ನಲ್ಲಿ 75 ರನ್‌ಗೆ 3ನೇ ವಿಕೆಟ್ ಪಡೆದರು. 63 ರನ್‌ಗೆ 4 ವಿಕೆಟ್‌ಗಳನ್ನು ಉರುಳಿಸಿದ ಇನ್ನೋರ್ವ ವೇಗಿ ಟಿಮ್ ಸೌಥಿ ನ್ಯೂಝಿಲ್ಯಾಂಡ್‌ನ ಯಶಸ್ವಿ ಬೌಲರ್ ಆಗಿ ಮಿಂಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News