×
Ad

ಮಹಿಳೆಯರ ಸಿಂಗಲ್ಸ್: ಹಾಲೆಪ್‌ ಗೆ ಗೆಲುವು

Update: 2019-08-28 23:33 IST

ನ್ಯೂಯಾಕ್, ಆ.28: ಕಳೆದ ಎರಡು ವರ್ಷ ಅಮೆರಿಕನ್ ಓಪನ್‌ನ ಮೊದಲ ಸುತ್ತಿನಲ್ಲಿ ಸೋತಿದ್ದ ಹಾಲಿ ವಿಂಬಲ್ಡನ್ ಚಾಂಪಿಯನ್ ಸಿಮೊನಾ ಹಾಲೆಪ್ ಈ ಬಾರಿ ಗೆಲುವಿನ ಆರಂಭ ಪಡೆದು ತಪ್ಪನ್ನು ತಿದ್ದಿಕೊಂಡಿದ್ದಾರೆ.

ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಹಾಲೆಪ್ ಅಮೆರಿಕದ ನಿಕೊಲ್ ಗಿಬ್ಸ್ ರನ್ನು 6-3, 3-6, 6-2 ಸೆಟ್‌ಗಳ ಅಂತರದಿಂದ ಸೋಲಿಸಿದರು. ಗುರುವಾರ ನಡೆಯಲಿರುವ ಎರಡನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಕ್ವಾಲಿಫೈಯರ್ ಟೇಲರ್ ಟೌನ್‌ಸೆಂಡ್‌ರನ್ನು ಎದುರಿಸಲಿದ್ದಾರೆ. 2017ರ ಯುಎಸ್ ಓಪನ್‌ನ ಮೊದಲ ಸುತ್ತಿನಲ್ಲಿ ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಮರಿಯಾ ಶರಪೋವಾಗೆ ಸೋತಿದ್ದ ಹಾಲೆಪ್ ಕಳೆದ ವರ್ಷ ಇಸ್ಟೊನಿಯದ ಕೈಯಾ ಕನೆಪಿಗೆ ಶರಣಾಗಿದ್ದರು.

ಚಾಂಪಿಯನ್ ಒಸಾಕಾಗೆ ಪ್ರಯಾಸದ ಗೆಲುವು

ಹಾಲಿ ಯುಎಸ್ ಓಪನ್ ಚಾಂಪಿಯನ್ ನವೊಮಿ ಒಸಾಕಾ ಅರ್ಥರ್ ಅಶೆ ಸ್ಟೇಡಿಯಂನಲ್ಲಿ ಎರಡು ಗಂಟೆ ಹಾಗೂ 28 ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ರಶ್ಯದ ಅನ್ನಾ ಬ್ಲಿಂಕೊವಾರನ್ನು 6-4, 6-7(5/7), 6-2 ಸೆಟ್‌ಗಳಿಂದ ಮಣಿಸಿ ಪ್ರಯಾಸಕಾರಿ ಗೆಲುವು ದಾಖಲಿಸಿದರು.

ಕಳೆದ ತಿಂಗಳು ವಿಂಬಲ್ಡನ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲೇ ಸೋತಿದ್ದ ಜಪಾನ್ ಸ್ಟಾರ್ ಆಟಗಾರ್ತಿ ಒಸಾಕಾ ಯುಎಸ್ ಓಪನ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ರಶ್ಯದ ಆಟಗಾರ್ತಿಯ ವಿರುದ್ಧ ಗೆಲುವು ದಾಖಲಿಸಲು ಪರದಾಡಿದರು. ಅಗ್ರ ಶ್ರೇಯಾಂಕದ ಹಾಲೆಪ್ ಮುಂದಿನ ಸುತ್ತಿನಲ್ಲಿ ಪೊಲೆಂಡ್‌ನ ಮಗ್ಡಾ ಲಿನೆಟ್ಟೆ ಅವರನ್ನು ಎದುರಿಸಲಿದ್ದಾರೆ. ಲಿನೆಟ್ಟೆ ಕಳೆದ ವಾರ ಬ್ರೊಂಕ್ಸ್ ನಲ್ಲಿ ಚೊಚ್ಚಲ ಡಬ್ಲುಟಿಎ ಪ್ರಶಸ್ತಿ ಜಯಿಸಿದ್ದರು. ಆರನೇ ಶ್ರೇಯಾಂಕದ ಪೆಟ್ರಾ ಕ್ವಿಟೋವಾ ಝೆಕ್‌ನ ಕ್ವಾಲಿಫೈಯರ್ ಡೆನಿಸಾ ಅಲ್ಲೆರ್ಟೊವಾರನ್ನು 6-2, 6-4 ನೇರ ಸೆಟ್‌ಗಳಿಂದ ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News